ಅಮೆರಿಕ: 45 ಮಿಲಿಯನ್ ಡಾಲರ್‌ ವಂಚನೆ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿ ಬಂಧನ‌

Update: 2022-07-01 15:50 GMT

ವಾಷಿಂಗ್ಟನ್, ಜು.1: ಹೂಡಿಕೆ ಯೋಜನೆ ಮೂಲಕ 10,000ಕ್ಕೂ ಅಧಿಕ ವ್ಯಕ್ತಿಗಳಿಗೆ 45 ಮಿಲಿಯನ್ ಡಾಲರ್‌ನಷ್ಟು ವಂಚನೆ ಎಸಗಿದ ಆರೋಪದಲ್ಲಿ 50 ವರ್ಷದ ಭಾರತೀಯ ಮೂಲದ ತಂತ್ರಜ್ಞಾನ ಉದ್ಯಮಿಯನ್ನು ಅಮೆರಿಕ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.
 
ನೆವಾಡದ ಲಾಸ್‌ವೆಗಾಸ್ ನಿವಾಸಿ ನೀಲ್ ಚಂದ್ರನ್‌ನನ್ನು ಬುಧವಾರ ಲಾಸ್‌ಏಂಜಲೀಸ್‌ನಲ್ಲಿ ಬಂಧಿಸಲಾಗಿದೆ. ದೋಷಾರೋಪಣೆ ಪ್ರಕಾರ, ಚಂದ್ರನ್ ತಂತ್ರಜ್ಞಾನ ಸಮೂಹ ಸಂಸ್ಥೆಗಳನ್ನು ಆರಂಭಿಸಿದ್ದು ಇವು ಅತ್ಯಂತ ಲಾಭದಲ್ಲಿ ನಡೆಯುತ್ತಿರುವುದರಿಂದ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಗಳು ಇವನ್ನು ಖರೀದಿಸಲು ಮುಂದಾಗಿವೆ ಎಂದು ಹೂಡಿಕೆದಾರರನ್ನು ನಂಬಿಸಿ ಈ ಸಂಸ್ಥೆಗಳಲ್ಲಿ ಹಣ ಹೂಡುವಂತೆ ಅವರನ್ನು ಪ್ರೇರೇಪಿಸುತ್ತಿದ್ದ. ಅಲ್ಲದೆ ತನ್ನ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ನಿಧಿಗೆ ಹೆಚ್ಚಿನ ಬಡ್ಡಿದರದ ಆಮಿಷವನ್ನೂ ಒಡ್ಡುತ್ತಿದ್ದ. 

‘ಫ್ರೀ ವಿ ಲ್ಯಾಬ್, ಸ್ಟುಡಿಯೊ ವಿ ಐಎನ್‌ಸಿ, ವಿಡೆಲಿವರಿ ಐಎನ್‌ಸಿ, 
ವಿಮಾರ್ಕೆಟ್ ಐಎನ್‌ಸಿ, ಸ್ಕೇಲೆಕ್ಸ್ ಯುಎಸ್‌ಎ ಐಎನ್‌ಸಿ’ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿದ್ದು ಸಂಸ್ಥೆಯ ಮೆಟಾವರ್ಸ್ (ಇಂಟರ್‌ನೆಟ್‌ನ ಮತ್ತೊಂದು ರೂಪ)ನಲ್ಲಿ ಬಳಸಲು ಕ್ರಿಪ್ಟೊಕರೆನ್ಸಿಯನ್ನೂ ಆರಂಭಿಸಿದ್ದ ಎಂದು ಉಲ್ಲೇಖಿಸಲಾಗಿದೆ. ಹೀಗೆ ಒಟ್ಟುಗೂಡಿಸಿದ ಸಂಪತ್ತನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹಾಗೂ ಐಷಾರಾಮಿ ಕಾರುಗಳ ಖರೀದಿಗೆ ಬಳಸುತ್ತಿದ್ದ. ಈತನ ಬ್ಯಾಂಕ್ ಖಾತೆ, ರಿಯಲ್ ಎಸ್ಟೇಟ್, 39 ಟೆಸ್ಲಾ ಕಾರು ಸಹಿತ ಐಷಾರಾಮಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ದೋಷಾರೋಪಣಾ ಪಟ್ಟಿಯಲ್ಲಿ ಕೋರಲಾಗಿದೆ. 

ಆರ್ಥಿಕ ವಂಚನೆಯ 3 ಕೌಂಟ್ ಅಪರಾಧ ಮತ್ತು ಕ್ರಿಮಿನಲ್ ಉದ್ದೇಶದ ಹಣಕಾಸು ವ್ಯವಹಾರದ 2 ಕೌಂಟ್ ಅಪರಾಧವನ್ನು ಚಂದ್ರನ್ ವಿರುದ್ಧ ದಾಖಲಿಸಲಾಗಿದೆ. ಆರೋಪ ಸಾಬೀತಾದರೆ ಆರ್ಥಿಕ ವಂಚನೆಯ ಪ್ರತೀ ಕೌಂಟ್ ಅಪರಾಧಕ್ಕೆ ತಲಾ 20 ವರ್ಷ ಮತ್ತು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಅವ್ಯವಹಾರದ ಪ್ರತೀ ಕೌಂಟ್‌ಗೆ ತಲಾ 10 ವರ್ಷ ಶಿಕ್ಷೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News