ಬಾಹ್ಯಾಕಾಶ ಸವಾಲುಗಳ ಹಿನ್ನೆಲೆ: ಹೊಸ ಘಟಕ ಸ್ಥಾಪಿಸಿದ ಅಮೆರಿಕ

Update: 2022-07-01 15:51 GMT

ವಾಷಿಂಗ್ಟನ್, ಜು.1: ಬೆದರಿಕೆ ವ್ಯವಸ್ಥೆ, ಅನ್ಯಲೋಕದ ಉದ್ದೇಶಗಳು ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿನ ಚಟುವಟಿಕೆಗಳ ಮೇಲೆ ನಿರ್ಣಾಯಕ ಬುದ್ಧಿಮತ್ತೆಯನ್ನು ಒದಗಿಸುವ ಸಲುವಾಗಿ ಅಮೆರಿಕವು ಹೊಸ ಘಟಕವನ್ನು ಸಕ್ರಿಯಗೊಳಿಸಿದೆ ಎಂದು ವರದಿಯಾಗಿದೆ.

‘ಸ್ಪೇಸ್ ಡೆಲ್ಟಾ 18’ ಎಂದು ಹೆಸರಿಸಲಾಗಿರುವ ಈ ಹೊಸ ಘಟಕವನ್ನು ಓಹಿಯೊ ರಾಜ್ಯದ ವಾಯುನೆಲೆಯಲ್ಲಿರುವ ‘ನ್ಯಾಷನಲ್ ಸ್ಪೇಸ್ ಇಂಟಲಿಜೆನ್ಸ್ ಸೆಂಟರ್(ಎನ್‌ಎಸ್‌ಐಸಿ)’ಯಿಂದ ನಿರ್ವಹಿಸಲಾಗುತ್ತದೆ. ರಾಷ್ಟ್ರೀಯ ರಕ್ಷಣಾ ನೀತಿ ಮತ್ತು ಬಾಹ್ಯಾಕಾಶ ವ್ಯವಸ್ಥೆಗಳ ವಿನಿಯೋಗದ ಮಾಹಿತಿಗೆ ನೆರವಾಗಲು ಬೆದರಿಕೆ ವಿಶ್ಲೇಷಣೆಯ ಮೇಲೆ ಕೇಂದ್ರೀಕರಿಸಿದ ಘಟಕವನ್ನು ಹೊಂದಿರುವುದು ಬಾಹ್ಯಾಕಾಶ ಪಡೆಗೆ ಅತೀ ಮುಖ್ಯವಾಗಿದೆ ಎಂದು ಬಾಹ್ಯಾಕಾಶ ಕಾರ್ಯಾಚರಣೆ ವಿಭಾಗದ ಕಮಾಂಡರ್ ಲೆ.ಜ. ಸ್ಟೀಫನ್ ವೈಟಿಂಗ್ ಹೇಳಿದ್ದಾರೆ.
 
ಎಸ್‌ಪಿಒಸಿ ಅಧೀನದ ಡೆಲ್ಟಾ 18 ಘಟಕದ ಸ್ಥಾಪನೆಯಿಂದ ಯುದ್ಧ-ಸಿದ್ಧ ಬುದ್ಧಿಮತ್ತೆ, ಸೈಬರ್, ಬಾಹ್ಯಾಕಾಶ ಮತ್ತು ಯುದ್ಧನೆರವು ಪಡೆಗಳ ರಚನೆ ಮತ್ತು ನಿರ್ವಹಣೆಗೆ ಪೂರಕವಾಗಲಿದೆ ಎಂದು ಸ್ಪೇಸ್ ಫೋರ್ಸ್‌ನ ಆಪರೇಷನ್ ಕಮಾಂಡ್ (ಎಸ್‌ಪಿಒಸಿ) ವಿಭಾಗದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಸ್ಪೇಸ್ ಡೆಲ್ಟಾ 18 ಘಟಕವು ಬೆದರಿಕೆ ವ್ಯವಸ್ಥೆ ಮತ್ತು ವಿದೇಶಿ ಉದ್ದೇಶಗಳ ಮೇಲೆ ನಿರ್ಣಾಯಕ ಬುದ್ಧಿವಂತಿಕೆಯನ್ನು ಪೂರೈಸುವ ಹೊಣೆ ವಹಿಸಲಿದೆ ಎಂದು ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕ ಅವ್ರಿಲ್ ಹೇಯ್ನ್ಸಿ ಹೇಳಿದ್ದಾರೆ. 
ಅಮೆರಿಕದ ಬಾಹ್ಯಾಕಾಶ ಪಡೆಯ ಗುಪ್ತಚರ ಸೇವಾ ಕೇಂದ್ರವಾಗಿ ಬಾಹ್ಯಾಕಾಶ ಅಭಿವೃದ್ಧಿಯ ಇತಿಹಾಸದಲ್ಲಿ ನಿರ್ಣಾಯಕ ಕ್ಷಣಗಳಲ್ಲಿ ಅಮೆರಿಕ ಮತ್ತದರ ಮಿತ್ರರ ಬಾಹ್ಯಾಕಾಶ ಯೋಜನೆಗೆ ನೆರವಾಗಲು ನ್ಯಾಷನಲ್ ಸ್ಪೇಸ್ ಇಂಟಲಿಜೆನ್ಸ್ ಸೆಂಟರ್ ಅತ್ಯುತ್ತಮ ಸ್ಥಾನದಲ್ಲಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News