ನೂಪುರ್‌ ಶರ್ಮಾ ವಿರುದ್ಧ ಸುಪ್ರೀಂಕೋರ್ಟ್ ನೀಡಿದ ಹೇಳಿಕೆಯನ್ನು ಹಿಂಪಡೆಯುವಂತೆ ಸಿಜೆಐಗೆ ಪತ್ರ

Update: 2022-07-01 17:42 GMT

ಹೊಸದಿಲ್ಲಿ: ಪ್ರವಾದಿ ಮಹಮ್ಮದರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿ ಕೋಲಾಹಲಕ್ಕೆ ಕಾರಣವಾಗಿರುವ ಬಿಜೆಪಿಯಿಂದ ಅಮಾನತುಗೊಂಡಿರುವ ನಾಯಕಿ ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠ ಮಾಡಿರುವ ಪ್ರತಿಕೂಲ ಹೇಳಿಕೆಗಳನ್ನು ಹಿಂಪಡೆಯುವಂತೆ ಕೋರಿ ಸಿಜೆಐ ಎನ್‌ವಿ ರಮಣ ಅವರಿಗೆ ಇಂದು ಅರ್ಜಿ ಸಲ್ಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಅಜಯ್ ಗೌತಮ್ ನೀಡಿರುವ ಪತ್ರದಲ್ಲಿ ನೂಪುರ್ ಶರ್ಮಾ ವಿರುದ್ಧ ನ್ಯಾಯಮೂರ್ತಿ ಸೂರ್ಯಕಾಂತ್ ಮಾಡಿರುವ ಟೀಕೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ನೂಪುರ್ ಶರ್ಮಾ ವಿರುದ್ಧ ನ್ಯಾಯಮೂರ್ತಿ ಸೂರ್ಯಕಾಂತ್ ಮಾಡಿರುವ ಟೀಕೆಗಳನ್ನು ಹಿಂಪಡೆಯುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಅಜಯ್ ಗೌತಮ್ ಅವರು ಸಿಜೆಐಗೆ ನೀಡಿರುವ ಪತ್ರದಲ್ಲಿ ನಿಪುರ್ ಶರ್ಮಾ ನ್ಯಾಯಯುತ ವಿಚಾರಣೆ ನಡೆಸಬೇಕು ಎಂದು ಕೋರಿದ್ದಾರೆ. ಇದಲ್ಲದೇ ನೂಪುರ್ ಶರ್ಮಾ ಅವರಿಗೆ ಪ್ರಾಣಾಪಾಯವಿದೆ ಎಂದು ಅಜಯ್ ಗೌತಮ್ ಹೇಳಿದ್ದಾರೆ. ಹೀಗಾಗಿ ಅವರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ದಿಲ್ಲಿಗೆ ವರ್ಗಾಯಿಸಬೇಕು ಎಂದು ಅವರು ಕೋರಿದ್ದಾರೆ.

ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೂಪುರ್ ಶರ್ಮಾ ಅವರ ಮೇಲೆ ಈ ಟೀಕೆಗಳನ್ನು ಮಾಡಿದ್ದಾರೆ ಎಂದು ಪತ್ರದ ಅರ್ಜಿಯಲ್ಲಿ ಹೇಳಲಾಗಿದೆ-

1- ಉದಯಪುರ ಹತ್ಯಾಕಾಂಡಕ್ಕೆ ನೂಪುರ್ ಶರ್ಮಾ ಕಾರಣ.

2- ದೇಶದ ಬೆಂಕಿಗೆ ಅವರೇ ಕಾರಣ.

3- ಟಿವಿ ಮುಂದೆ ಬೇಷರತ್ ಕ್ಷಮೆ ಕೇಳಬೇಕಿತ್ತು.

4- ನೂಪುರ್ ಶರ್ಮಾ ದೇಶದ ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ.

5- ದೇಶದಲ್ಲಿ ಏನೇ ನಡೆದರೂ ಅದಕ್ಕೆ ನೂಪುರ್ ಶರ್ಮಾ ಮಾತ್ರ ಹೊಣೆ.

6- ನೂಪುರ್ ಶರ್ಮಾ ಅವರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದಾರೆ.

7- ದೇಶಾದ್ಯಂತ ನಡೆಯುತ್ತಿರುವ ಘಟನೆಗಳಿಗೆ ಅವರೊಬ್ಬರೇ ಹೊಣೆಗಾರ್ತಿ.

8- ನೂಪುರ್ ಶರ್ಮಾ ಅವರ ಲಘು ನಾಲಿಗೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

9- ಉದಯಪುರದಲ್ಲಿ ನಡೆದ ಅಹಿತಕರ ಘಟನೆಗೆ ನೂಪುರ್ ಮೇಲಿನ ಕೋಪವೇ ಕಾರಣ.

ಬಿಜೆಪಿ ಪಕ್ಷದಿಂದ ಹೊರಹಾಕಿತ್ತು

ಬಿಜೆಪಿಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರು ಇತ್ತೀಚೆಗೆ ಟಿವಿ ಚರ್ಚೆಯಲ್ಲಿ ಪ್ರವಾದಿ ಮಹಮ್ಮದ್ ವಿರುದ್ಧ ನಿಂದನಾತ್ಮಕ ಟೀಕೆಗಳನ್ನು ಮಾಡಿದ್ದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಕುವೈತ್, ಯುಎಇ, ಕತಾರ್ ಸೇರಿದಂತೆ ಎಲ್ಲಾ ಮುಸ್ಲಿಂ ರಾಷ್ಟ್ರಗಳು ಭಾರತದ ರಾಯಭಾರಿ ಕಛೇರಿಗಳನ್ನು ಕರೆಸಿ ಆಡಳಿತರೂಢ ಪಕ್ಷದ ವಕ್ತಾರೆಯ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿತ್ತು. ಇದಾದ ಬಳಿಕ ಬಿಜೆಪಿ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಅದರ ಬೆನ್ನಲ್ಲೇ, ನೂಪುರ್‌ ಶರ್ಮಾ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ನನ್ನ ಮಾತುಗಳನ್ನು ವಾಪಸ್ ತೆಗೆದುಕೊಳ್ಳುತ್ತೇನೆ, ಯಾರನ್ನೂ ಕೆಣಕುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ಹೇಳಿದ್ದರು.

 ಆದರೆ, ನೂಪುರ್‌ ಶರ್ಮಾ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗದ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಕೆಯ  ವಿರುದ್ಧ ಪ್ರಕರಣಗಳೂ ದಾಖಲಾಗಿವೆ. ಅದೇ ಸಮಯದಲ್ಲಿ, ನೂಪುರ್ ಶರ್ಮಾ ಅವರು ಎಲ್ಲಾ ಪ್ರಕರಣಗಳನ್ನು ದಿಲ್ಲಿಗೆ ವರ್ಗಾಯಿಸಲು ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು, ಅದನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌, ದೇಶ ಹೊತ್ತಿ ಉರಿಯಲು ನೂಪುರ್‌ ಶರ್ಮಾ ಅವರೇ ಕಾರಣ ಎಂದು ಹೇಳಿ, ಶರ್ಮಾ ದೇಶದ ಕ್ಷಮೆ ಕೋರಬೇಕು ಎಂದು ಹೇಳಿತ್ತು. ಸುಪ್ರೀಂ ಕೋರ್ಟ್‌ ನ ಈ ಹೇಳಿಕೆ ವಿರುದ್ಧ ಬಲಪಂಥೀಯರು ಆಕ್ರೋಶಗೊಂಡಿದ್ದು, ಸುಪ್ರೀಂ ಕೋರ್ಟ್‌ ಅನ್ನೇ ನಿಂದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News