ಮಣಿಪುರ ಭೂಕುಸಿತ: ಸಾವಿನ ಸಂಖ್ಯೆ 20ಕ್ಕೆ

Update: 2022-07-02 02:25 GMT
Photo: PTI

ಇಂಫಾಲ: ಮಣಿಪುರದ ನೋನಿ ಜಿಲ್ಲೆಯಲ್ಲಿ ಪ್ರಾಂತೀಯ ಸೇನೆಯ ತುಪುಲ್ ರೈಲ್ವೆ ನಿರ್ಮಾಣ ಕಾಮಗಾರಿ ಶಿಬಿರದ ಬಳಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೇರಿದೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ.

ಬುಧವಾರ ರಾತ್ರಿ ಕಳೆದು ಗುರುವಾರ ನಸುಕಿನಲ್ಲಿ ಇಡೀ ಬೆಟ್ಟ ಕುಸಿದು ಈ ದುರಂತ ಸಂಭವಿಸಿತ್ತು. ಜಿರಿಬಾಮ್‍ನಿಂದ ಇಂಫಾಲವರೆಗಿನ ರೈಲ್ವೆ ಹಳಿ ಕಾವಲಿಗೆ ನಿಯೋಜಿಸಲಾಗಿದ್ದ ಭಾರತೀಯ ಸೇಣೆಯ 107 ಟೆರಿಟೋರಿಯಲ್ ಆರ್ಮಿ ಶಿಬಿರಕ್ಕೆ ಇದರಿಂದ ವ್ಯಾಪಕ ಹಾನಿಯಾಗಿತ್ತು.

ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ (ಎನ್‍ಡಿಆರ್‍ಎಫ್ ಮತ್ತು ರಾಜ್ಯ ವಿಪತ್ತು ಸ್ಪಂದನೆ ಪಡೆ (ಎಸ್‍ಡಿಆರ್‍ಎಫ್)ನ ಹಎಚ್ಚುವರಿ ತಂಡಗಳನ್ನು ಸಿಲ್ಚೇರ್ ಮತ್ತು ಕೋಹಿಮಾದಿಂದ ಕರೆಸಲಾಗಿದ್ದು, ಹಾಲಿ ಇರುವ ಶೋಧನಾ ತಂಡಗಳ ಜತೆ ಇವು ಸೇರಿಕೊಳ್ಳಲಿವೆ ಎಂದು ಉಪವಿಭಾಗ ಅಧಿಕಾರಿ ಸೋಲೊಮನ್ ಎಲ್ ಫಿಮೇಟ್ ಹೇಳಿದ್ದಾರೆ.

ಇದು ರಾಜ್ಯದ ಇತಿಹಾಸದಲ್ಲೇ ಭೀಕರ ಭೂಕುಸಿತದ ಪ್ರಕರಣವಾಗಿದ್ದು, 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿದೆ ಎಂದು ಅವರು ಹೇಳಿದ್ದಾರೆ. ಇದುವರೆಗೆ 13 ಮಂದಿ ಸೇನಾ ಸಿಬ್ಬಂದಿ ಮತ್ತು 5 ಮಂದಿ ನಾಗರಿಕರನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ 15 ಮಂದಿ ಸಿಬ್ಬಂದಿ ಮತ್ತು 29 ಮಂದಿ ನಾಗರಿಕರಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ದುರಂತದಲ್ಲಿ ಪಶ್ಚಿಮ ಬಂಗಾಳದ ಒಂಬತ್ತು ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News