ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತಿದ್ದೇನೆ: ನ್ಯಾಯಾಂಗದ ಸ್ಥಿತಿಯ ಕುರಿತು ಕಪಿಲ್ ಸಿಬಲ್ ಕಳವಳ

Update: 2022-07-03 17:18 GMT

ಹೊಸದಿಲ್ಲಿ,ಜು.3: ಆಲ್ಟ್ ನ್ಯೂಸ್ ನ ಸಹಸ್ಥಾಪಕ ಮುಹಮ್ಮದ್ ಝುಬೈರ್, ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟ್ಲವಾಡ್ ಮತ್ತಿತರರ ವಿರುದ್ಧ ಇತ್ತೀಚಿನ ನ್ಯಾಯಾಲಯ ತೀರ್ಪುಗಳ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು, ‘ನ್ಯಾಯಾಂಗವು ನಮ್ಮನ್ನು ನಿರಾಶೆಗೊಳಿಸಿದೆ ಮತ್ತು ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತಿದ್ದೇನೆ ’ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಯಾವುದೇ ಕೋಮು ಪರಿಣಾಮವಿಲ್ಲದಿದ್ದರೂ ನಾಲ್ಕು ವರ್ಷಗಳ ಹಿಂದಿನ ಟ್ವೀಟ್ ಗಾಗಿ ಝುಬೈರ್ ರನ್ನು ಬಂಧಿಸಲಾಗಿದೆ ಎಂದು ಬೆಟ್ಟು ಮಾಡಿದ ಸಿಬಲ್, ‘50 ವರ್ಷಗಳಿಂದಲೂ ನಾನು ಭಾಗವಾಗಿರುವ ನ್ಯಾಯಾಂಗದ ಕೆಲವು ಸದಸ್ಯರು ನಮ್ಮನ್ನು ನಿರಾಶೆಗೊಳಿಸಿದ್ದಾರೆ. ಇದಕ್ಕಾಗಿ ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ. ಕಾನೂನಿನ ಆಡಳಿತದ ಉಲ್ಲಂಘನೆಗಳ ಬಗ್ಗೆ ನ್ಯಾಯಾಂಗವು ಕಣ್ಣು ಮುಚ್ಚಿಕೊಂಡಾಗ ಕಾನೂನಿನ ಆಡಳಿತವನ್ನು ರಕ್ಷಿಸಲು ರೂಪುಗೊಂಡಿರುವ ಸಂಸ್ಥೆಯೇ ಕಾನೂನಿನ ಆಡಳಿತವನ್ನು ಉಲ್ಲಂಘಿಸಲು ಏಕೆ ತೆರೆದ ಕಣ್ಣುಗಳಿಂದ ಅವಕಾಶ ನೀಡುತ್ತದೆ ಎಂದು ಅಚ್ಚರಿಯಾಗುತ್ತದೆ ’ಎಂದರು.

ಝುಬೈರ್ ಬಂಧನವು ದುರುದ್ದೇಶದಿಂದ ಕೂಡಿದೆ ಎಂದ ಅವರು,ಅದಕ್ಕಿಂತ ಮಿಗಿಲಾಗಿ ಬಂಧನವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಈಗ ಗೊತ್ತಾದ ಬಳಿಕ ತನಿಖಾ ಸಂಸ್ಥೆಯು ಮೂಲ ಬಂಧನಕ್ಕೆ ಸಂಬಂಧವಿಲ್ಲದ ಇತರ ವಿಷಯಗಳಿಗಾಗಿ ಹುಡುಕಾಡುತ್ತಿದೆ ಎಂದರು.

ತನಿಖಾ ಸಂಸ್ಥೆಗಳು ಮೊದಲು ವ್ಯಕ್ತಿಯನ್ನು ಬಂಧಿಸುತ್ತವೆ ಮತ್ತು ನಂತರ ಆತ ಮಾಡಿರಬಹುದಾದ ಉಲ್ಲಂಘನೆಗಳನ್ನು ಹುಡುಕುತ್ತವೆ ಎಂದು ಆರೋಪಿಸಿದ ಸಿಬಲ್,ಅದಕ್ಕಾಗಿ ಇತರ ದಾಖಲೆಗಳನ್ನು ಪಡೆದುಕೊಳ್ಳಲು ಅವರು ಪ್ರಯತ್ನಿಸುತ್ತಾರೆ ಮತ್ತು ನಂತರ ಆರೋಪಿಗೆ ಜಾಮೀನು ನಿರಾಕರಿಸುವಂತಾಗಲು ಪ್ರಯತ್ನವಾಗಿ ಇತರ ಆರೋಪಗಳನ್ನು ಹೊರಿಸಲು ನ್ಯಾಯಾಲಯಕ್ಕೆ ಮರಳುತ್ತಾರೆ ಎಂದರು.

ಶನಿವಾರ ಝುಬೈರ್ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯವು ಪೊಲೀಸರು ಅವರ ವಿರುದ್ಧ ಹೊಸದಾಗಿ ಕ್ರಿಮಿನಲ್ ಒಳಸಂಚು, ಸಾಕ್ಷನಾಶ ಮತ್ತು ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆ ಆರೋಪಗಳನ್ನು ಹೊರಿಸಿದ ಬಳಿಕ ಜಾಮೀನು ನಿರಾಕರಿಸಿತ್ತು ಮತ್ತು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News