ʼಕ್ಯಾಪ್ಟನ್‌ ಮಿಲ್ಲರ್ʼ: ಕುತೂಹಲ ಹುಟ್ಟಿಸಿದ ಧನುಷ್‌ ಚಿತ್ರದ ಟೀಸರ್

Update: 2022-07-04 13:13 GMT

ಚೆನ್ನೈ: ಹಾಲಿವುಡ್‌ ಅಂಗಳಕ್ಕೂ ಕಾಲಿಟ್ಟಿರುವ ತಮಿಳಿನ ಪ್ರತಿಭಾವಂತ ನಟ ಧನುಷ್‌ ಅವರ ಹೊಸ ಚಿತ್ರ ಘೋಷಣೆಯಾಗಿದೆ. ಐತಿಹಾಸಿಕ ಕಥಾ ಹಂದರವುಳ್ಳ ಈ ಚಿತ್ರವು ಅವರ ವೃತ್ತಿಜೀವನದಲ್ಲೇ ಅತಿದೊಡ್ಡ ಚಿತ್ರವಾಗಲಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ʼಕ್ಯಾಪ್ಟನ್‌ ಮಿಲ್ಲರ್‌ʼ ತಮಿಳು ಭಾಷೆಯಿಂದ ಬರುವ ಪ್ಯಾನ್‌ ಇಂಡಿಯಾ ಚಿತ್ರವಾಗಿರಲಿದೆ.

ಚಿತ್ರವು 1930 ಮತ್ತು 40ರ ದಶಕದ ಮದ್ರಾಸ್ ಪ್ರೆಸಿಡೆನ್ಸಿಯ ಹಿನ್ನೆಲೆಯಲ್ಲಿ ಸೆಟ್ಟೇರಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಧನುಷ್‌ ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿರುವ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಲು ನಿರ್ದೇಶಕ ಅರುಣ್ ಮಾಥೇಶ್ವರನ್ ತಯಾರಾಗಿದ್ದಾರೆ.

ತಮಿಳಿನಲ್ಲಿ ಚಿತ್ರೀಕರಣ ನಡೆಯಲಿದ್ದು, ಭಾರತದ ಇತರೆ ಭಾಷೆಗಳಿಗೂ ಡಬ್ ಆಗಲಿದೆ. ಬ್ಲಾಕ್‌ಬಸ್ಟರ್ ಹಿಟ್‌ಗಳಾದ ಕೆಜಿಎಫ್ ಮತ್ತು ಪುಷ್ಪದಂತೆ, ಕ್ಯಾಪ್ಟನ್ ಮಿಲ್ಲರ್‌ನ ಥೀಮ್ ಸಾರ್ವತ್ರಿಕವಾಗಿದ್ದು, ಪ್ರಪಂಚದಾದ್ಯಂತದ ಪ್ರೇಕ್ಷಕರನ್ನೂ ತಲುಪುತ್ತದೆ ಎಂದು ಚಿತ್ರತಂಡ ಮೂಲಗಳು ಹೇಳಿವೆ.

ಚಿತ್ರಕ್ಕೆ ನಾಗೂರನ್ ಸಂಕಲನ ಮತ್ತು ಶ್ರೇಯಸ್ ಕೃಷ್ಣ ಛಾಯಾಗ್ರಹಣವಿದೆ.   ಮದನ್ ಕರ್ಕಿ ಸಂಭಾಷಣೆ ಬರೆಯಲಿದ್ದು, ಸರ್ಪಟ್ಟ ಪರಂಬರೈ ಖ್ಯಾತಿಯ ತಾ ರಾಮಲಿಂಗಂ ಅವರು ಕಲಾ ನಿರ್ದೇಶನವನ್ನು ನೀಡಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಪೂರ್ಣಿಮಾ ರಾಮಸ್ವಾಮಿ ಮತ್ತು ಕಾವ್ಯ ಶ್ರೀರಾಮ್ ಅವರು ಕ್ರಮವಾಗಿ ಧನುಷ್ ಅವರ ವೇಷಭೂಷಣ ವಿನ್ಯಾಸ ಮತ್ತು ನಿರ್ವಹಣೆಯನ್ನು ಮಾಡಲಿದ್ದಾರೆ. ಸಾಹಸ ನಿರ್ದೇಶನವನ್ನು ದಿಲೀಪ್ ಸುಬ್ಬರಾಯನ್ ವಹಿಸಲಿದ್ದು, ಜಿವಿ ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಕ್ಯಾಪ್ಟನ್ ಮಿಲ್ಲರ್ ಅನ್ನು ಟಿ.ಜಿ. ಸತ್ಯಜ್ಯೋತಿ ಫಿಲಂಸ್‌ನ ತ್ಯಾಗರಾಜನ್ ಮತ್ತು ಸೆಂಥಿಲ್ ತ್ಯಾಗರಾಜನ್, ಅರ್ಜುನ್ ತ್ಯಾಗರಾಜನ್, ಸಹ ನಿರ್ಮಾಪಕರಾದ ಜಿ. ಸರವಣನ್ ಮತ್ತು ಸಾಯಿ ಸಿದ್ಧಾರ್ಥ್ ನಿರ್ಮಿಸಿದ್ದಾರೆ.

 ಈಗಾಗಲೇ ಬಾಲಿವುಡ್‌, ಹಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿರುವ ಧನುಷ್‌ ಅವರ ಹಾಲಿವುಡ್‌ ಚಿತ್ರ ಜುಲೈ 22 ರಂದು ಬಿಡುಗಡೆಯಾಗಲಿದೆ. ಕ್ರಿಸ್ ಇವಾನ್ಸ್, ರಿಯಾನ್ ಗೊಸ್ಲಿಂಗ್ ಮತ್ತು ಅನಾ ಡಿ ಅರ್ಮಾಸ್ ಸಹ ನಟಿಸಿರುವ ʼದಿ ಗ್ರೇ ಮ್ಯಾನ್‌ʼ ಚಿತ್ರವು ಜುಲೈ 22 ರಂದು ಬಿಡುಗಡೆಯಾಗಲಿದೆ. ಅವೇಂಜರ್ಸ್‌ ಖ್ಯಾತಿಯ ರುಸೊ ಬ್ರದರ್ಸ್‌ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News