ರಾಹುಲ್ ಗಾಂಧಿಯವರ ನಕಲಿ ವೀಡಿಯೊಗಾಗಿ ಬಿಜೆಪಿ ಸಂಸದರ ವಿರುದ್ಧ ಪ್ರಕರಣ ದಾಖಲು: ಕಾಂಗ್ರೆಸ್

Update: 2022-07-05 05:08 GMT

 
ಹೊಸದಿಲ್ಲಿ,ಜು.4: ಕೋಮು ಸೌಹಾರ್ದವನ್ನು ಕದಡುವ ಉದ್ದೇಶದಿಂದ ರಾಹುಲ್ ಗಾಂಧಿಯವರ ನಕಲಿ ವೀಡಿಯೊ ಸೃಷ್ಟಿಗೆ ಸಂಬಂಧಿಸಿದಂತೆ ಪಕ್ಷದ ದೂರಿನ ಮೇರೆಗೆ ಬಿಜೆಪಿ ಸಂಸದರಾದ ರಾಜ್ಯವರ್ಧನ ರಾಠೋಡ್ ಮತ್ತು ಸುಬ್ರತ್ ಪಾಠಕ್ ಹಾಗೂ ಇತರ ಮೂವರ ವಿರುದ್ಧ ಛತ್ತೀಸ್‌ಗಡದ ಬಿಲಾಸಪುರದಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ತಂಡದ ಮುಖ್ಯಸ್ಥ ಪವನ್ ಖೇರಾ ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್ ಅವರ ವಿರುದ್ಧ ದಿಲ್ಲಿ,ಜಾರ್ಖಂಡ್,ಮಹಾರಾಷ್ಟ್ರ, ಮಧ್ಯಪ್ರದೇಶ,ರಾಜಸ್ಥಾನ ಮತ್ತುಉತ್ತರ ಪ್ರದೇಶಗಳಲ್ಲಿಯೂ ದೂರುಗಳನ್ನು ದಾಖಲಿಸಿದೆ ಎಂದರು.
 
ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು,ರಾಹುಲ್ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದಕ್ಕಾಗಿ ಈ ನಾಯಕರ ವಿರುದ್ಧ ಪಕ್ಷವು ಕ್ರಮ ಜರುಗಿಸಬೇಕು ಮತ್ತು ಅವರ ಟ್ವಿಟರ್ ಟ್ವೈಮ್‌ಲೈನ್‌ಗಳಿಂದ ಸುಳ್ಳು ವೀಡಿಯೊವನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರಿಗೆ ಪತ್ರವನ್ನು ಬರೆದಿದ್ದರು.

ರಾಠೋಡ್ ವಿರುದ್ಧ ದೇಶದ್ರೋಹದ ಆರೋಪವನ್ನು ಹೊರಿಸಿದ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ಸುಪ್ರಿಯಾ ಶ್ರೀನಾತೆ ಅವರು,ಮಾಜಿ ಕೇಂದ್ರ ಸಚಿವರು ದೇಶದಲ್ಲಿ ಕೋಮು ಸೌಹಾರ್ದವನ್ನು ಕದಡುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಹರಡಲು ಪ್ರಯತ್ನಿಸಿದರೆ ಅದು ದೇಶದ್ರೋಹಕ್ಕೆ ಸಮನಾಗುತ್ತದೆ ಎಂದರು. 

ತನ್ನ ವಯನಾಡ್ ಕಚೇರಿಯ ಮೇಲೆ ಎಸ್‌ಎಫ್‌ಐ ಕಾರ್ಯಕರ್ತರ ಹಿಂಸಾಚಾರ ಕುರಿತು ರಾಹುಲ್ ನೀಡಿದ್ದ ಹೇಳಿಕೆಯನ್ನು ಪ್ರಸಾರಿಸಿದ್ದ ಝೀ ನ್ಯೂಸ್‌ನ ನಿರೂಪಕ ರೋಹಿತ್ ರಂಜನ್,‌ ಅದನ್ನು ಉದಯಪುರದಲ್ಲಿ ಕನ್ಹಯಲಾಲ್ ಅವರ ಘೋರ ಹತ್ಯೆಯ ಆರೋಪಿಗಳ ಪರವಾಗಿ ಹೇಳಿಕೆಯಂತೆ ಕಂಡು ಬರುವಂತೆ ತಿರುಚಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು.

ಈ ಬಗ್ಗೆ  ಝೀ ನ್ಯೂಸ್ ರವಿವಾರ ಕ್ಷಮೆಯನ್ನು ಯಾಚಿಸಿತ್ತು. ರಾಹುಲ್ ಮತ್ತು ಪಕ್ಷದ ಇತರ ನಾಯಕರನ್ನು ಭಯೋತ್ಪಾದಕರೊಂದಿಗೆ ತಳುಕು ಹಾಕುವ ಪ್ರಯತ್ನದ ವಿರುದ್ಧ ಶ್ರೀನಾತೆ ಬಿಜೆಪಿಗೆ ಎಚ್ಚರಿಕೆಯನ್ನೂ ನೀಡಿದರು. ಬಿಜೆಪಿ ಭಯೋತ್ಪಾದಕರೊಂದಿಗೆ ನಂಟು ಹೊಂದಿದೆ ಎಂದು ಆರೋಪಿಸಿದ ಖೇರಾ, ರವಿವಾರ ಕಾಶ್ಮೀರದಲ್ಲಿ ಬಂಧಿಸಲ್ಪಟ್ಟ ಭಯೋತ್ಪಾದಕ ತಾಲಿಬ್ ಶಾ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಘಟಕದ ಸದಸ್ಯ ಎನ್ನುವುದು ಬೆಳಕಿಗೆ ಬಂದಿದೆ. ಉದಯಪುರದಲ್ಲಿ ಕನ್ಹಯಲಾಲ್ ಹತ್ಯೆಯ ಪ್ರಮುಖ ಆರೋಪಿ ರಿಯಾಝ್ ಅತ್ತಾರಿಯೂ ಬಿಜೆಪಿ ಸದಸ್ಯನಾಗಿದ್ದಾನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News