ದೇವತೆಗಳ ಚಿತ್ರ ಇರುವ ಪೇಪರಿನಲ್ಲಿ ಕೋಳಿ ಮಾಂಸ ಕಟ್ಟಿದ ವ್ಯಾಪಾರಿಯನ್ನು ಬಂಧಿಸಿದ ಉತ್ತರಪ್ರದೇಶ ಪೊಲೀಸ್‌!

Update: 2022-07-04 17:52 GMT

ಲಖ್ನೋ: ಉತ್ತರಪ್ರದೇಶದ ಸಂಭಾಲ್ ನಗರದಲ್ಲಿ, ದೇವರು ಮತ್ತು ದೇವತೆಗಳ ಚಿತ್ರಗಳಿರುವ ನ್ಯೂಸ್‌ ಪೇಪರ್‌ನಲ್ಲಿ ಕೋಳಿ ಮಾಂಸ ಕಟ್ಟಿ ಕೊಡುತ್ತಿದ್ದ ಎಂದು ಆರೋಪಿಸಿ ಹೋಟೆಲ್ ನಿರ್ವಾಹಕರೊಬ್ಬರನ್ನು ಬಂಧಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಈ ಮಾಹಿತಿ ನೀಡಿದ್ದಾರೆ. ಸೋಮವಾರ ಹಿರಿಯ ಸಬ್‌ಇನ್‌ಸ್ಪೆಕ್ಟರ್‌ ಅಜಯ್‌ಕುಮಾರ್‌ ಅವರು ಈ ದೂರು ದಾಖಲಿಸಿದ್ದಾರೆ ಎಂದು ಅವರು ತಿಳಿಸಿರುವುದಾಗಿ  abplive.com ವರದಿ ಮಾಡಿದೆ.

ಸಂಭಾಲ್ ಕೊತ್ವಾಲಿ ಪ್ರದೇಶದಲ್ಲಿ ತಾಲಿಬ್ ಹುಸೇನ್ ಎಂಬ ವ್ಯಕ್ತಿ ತನ್ನ ಹೋಟೆಲ್‌ನಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳಿರುವ ಪೇಪರಿನಲ್ಲಿ ಕೋಳಿ ಮಾಂಸ ಕಟ್ಟಿ, ಮಾರಾಟ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಬಗ್ಗೆ ಕೆಲವರು ದೂರು ನೀಡಿದ್ದು, ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿದೆ ಎಂದು ತಿಳಿಸಿದರು.

ತನಿಖೆ ವೇಳೆ ತಾಲಿಬ್ ಪೊಲೀಸ್ ತಂಡದ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಭಾನುವಾರ ತಡರಾತ್ರಿ  ಐಪಿಸಿ ಸೆಕ್ಷನ್ 153 'ಎ' (ಹಗೆತನವನ್ನು ಉತ್ತೇಜಿಸುವುದು), 295 ಎ (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳಕ್ಕೆ ಹಾನಿ ಮಾಡುವುದು ಅಥವಾ ಅಪವಿತ್ರಗೊಳಿಸುವುದು), ಸೆಕ್ಷನ್ 353, ಸೆಕ್ಷನ್ 307 (ಕೊಲೆಗೆ ಯತ್ನ)   ಅಡಿಯಲ್ಲಿ ಪ್ರಕರಣ  ದಾಖಲಿಸಿದ ನಂತರ,  ಸ್ಥಳದಿಂದ ದೇವತೆಗಳ ಚಿತ್ರಗಳಿರುವ ಪೇಪರ್ ಗಳು ಮತ್ತು ದಾಳಿಗೆ ಬಳಸಿದ ಚಾಕುವನ್ನು   ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಚಕ್ರೇಶ್ ಮಿಶ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News