ತಮಿಳುನಾಡಿಗೆ ಸ್ವಾಯತ್ತತೆ ನೀಡಿ, ಇಲ್ಲದಿದ್ದರೆ ಪ್ರತ್ಯೇಕ ದೇಶಕ್ಕಾಗಿ ಹೋರಾಟ:‌ ಎ.ರಾಜಾ

Update: 2022-07-04 18:04 GMT
PHOTO:Twitter@Andimuthu Raja

ಚೆನ್ನೈ,ಜು.4: ತಮಿಳುನಾಡಿಗೆ ಸಂಪೂರ್ಣ ಸ್ವಾಯತ್ತತೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿರುವ ಡಿಎಂಕೆ ನಾಯಕ ಎ.ರಾಜಾ ಅವರು, ‘ಪ್ರತ್ಯೇಕ ದೇಶಕ್ಕಾಗಿ ಹೋರಾಡುವ ಸ್ಥಿತಿಗೆ ನಮ್ಮನ್ನು ತಳ್ಳಬೇಡಿ’ಎಂದು ಎಚ್ಚರಿಕೆ ನೀಡಿದ್ದಾರೆ.

 ರವಿವಾರ ನಾಮಕ್ಕಲ್ನಲ್ಲಿ ಪಕ್ಷದ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ಅವರು,ದ್ರಾವಿಡ ಚಳವಳಿಯ ಹರಿಕಾರ ಪೆರಿಯಾರ್ ಅವರು ಸ್ವತಂತ್ರ ತಮಿಳುನಾಡಿನ ಪ್ರತಿಪಾದಕರಾಗಿದ್ದರು. ಆದರೆ ಅದರಿಂದ ದೂರ ಸರಿದಿದ್ದ ಪಕ್ಷವು ಪೆರಿಯಾರ್ರನ್ನು ಒಪ್ಪಿಕೊಂಡರೂ ಸಮಗ್ರತೆ ಮತ್ತು ಪ್ರಜಾಪ್ರಭುತ್ವವನ್ನು ಬೆಂಬಲಿಸಿತ್ತು ಮತ್ತು ‘ಭಾರತವು ಚಿರಾಯುವಾಗಲಿ’ಎಂದು ಹೇಳಿತ್ತು. 

ಪಕ್ಷವು ಇಂದಿಗೂ ಅದಕ್ಕೆ ಅಂಟಿಕೊಂಡಿದೆ ಎಂದರು. ‘ನಮ್ಮ ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಸ್ಥಾಪಕ ಸಿ.ಎನ್.ಅಣ್ಣಾದುರೈ ಅವರ ಮಾರ್ಗದಲ್ಲಿ ಸಾಗುತ್ತಿದ್ದಾರೆ,ನಮ್ಮನ್ನು ಪೆರಿಯಾರ್ ದಾರಿಗೆ ತಳ್ಳಬೇಡಿ. ನಾವು ಪ್ರತ್ಯೇಕ ದೇಶವನ್ನು ಬಯಸುವಂತೆ ಮಾಡಬೇಡಿ. ರಾಜ್ಯಕ್ಕೆ ಸ್ವಾಯತ್ತತೆ ನೀಡಿ ಮತ್ತು ಅಲ್ಲಿಯವರೆಗೆ ನಾವು ವಿರಮಿಸುವುದಿಲ್ಲ ’ ಎಂದು ರಾಜಾ ಹೇಳಿದರು.

ರಾಜಾರ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀಕ್ಷ್ಣ ಟೀಕೆಗಳು ವ್ಯಕ್ತವಾಗಿದ್ದು,‘ಪ್ರತ್ಯೇಕತಾವಾದಿ ’ ಹೇಳಿಕೆಗಾಗಿ ಹಲವರು ಅವರ ವಿರುದ್ಧ ದಾಳಿ ನಡೆಸಿದ್ದಾರೆ. ರಾಜ್ಯ ಬಿಜೆಪಿ ಘಟಕವು ರಾಜಾ ಹೇಳಿಕೆಯನ್ನು ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News