ಝೀ ನ್ಯೂಸ್ ನಿರೂಪಕ ರೋಹಿತ್ ರಂಜನ್ ವಶಕ್ಕೆ ಪಡೆದ ಗಾಝಿಯಾಬಾದ್ ಪೊಲೀಸರು
ಹೊಸದಿಲ್ಲಿ: ಝೀ ಟಿವಿ ಸುದ್ದಿ ನಿರೂಪಕ ರೋಹಿತ್ ರಂಜನ್ ಅವರನ್ನು ಗಾಝಿಯಾಬಾದ್ ಪೊಲೀಸರು ಇಂದು ದಿಲ್ಲಿಯ ಸಮೀಪವಿರುವ ಅವರ ಮನೆಯಿಂದ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಛತ್ತೀಸ್‌ಗಢ ಪೊಲೀಸರು ನಿರೂಪಕ ರಂಜನ್ ರನ್ನು ಬಂಧಿಸಲು ಪ್ರಯತ್ನಿಸುತ್ತಿರುವಾಗಲೇ ಗಾಝಿಯಾಬಾದ್‌ನ ಪೊಲೀಸರು ರಂಜನ್ ರನ್ನು ಕರೆದೊಯ್ದಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢ ಹಾಗೂ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಎರಡು ರಾಜ್ಯಗಳ ಪೊಲೀಸರು ಇಂದು ಬೆಳಿಗ್ಗೆ ರಂಜನ್ ರನ್ನು ಕಸ್ಟಡಿಗೆ ಪಡೆಯಲು ಜಟಾಪಟಿ ನಡೆಸುತ್ತಿರುವ ದೃಶ್ಯ ಕಂಡುಬಂತು.
ಗಾಝಿಯಾಬಾದ್ ಪೊಲೀಸರು ಪತ್ರಕರ್ತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಛತ್ತೀಸ್‌ಗಢ ಪೊಲೀಸ್ ತಂಡ ರಂಜನ್ ರನ್ನು ಬಂಧಿಸುವುದನ್ನು ತಡೆದರು. ಕಠಿಣವಲ್ಲದ ಜಾಮೀನು ನೀಡಬಹುದಾದ ಆರೋಪಗಳನ್ನು ಎದುರಿಸುತ್ತಿರುವ ರಂಜನ್ ಪ್ರಸ್ತುತ ಉತ್ತರಪ್ರದೇಶ ಪೊಲೀಸರ ವಶದಲ್ಲಿದ್ದಾರೆ.
ಛತ್ತೀಸ್ ಗಡ ಪೊಲೀಸರು ಬೆಳಗ್ಗೆ 5:30ರಿಂದ ನನ್ನ ಮನೆ ಮುಂದೆ ನಿಂತಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂದು ರಂಜನ್ ಟ್ವೀಟ್ ಮೂಲಕ ಆರೋಪಿಸಿದರು.
ವಾರಂಟ್ ಇರುವವರೆಗೆ ಯಾರಿಗೂ ತಿಳಿಸುವ ಅಗತ್ಯವಿಲ್ಲ ಎಂದು ಛತ್ತೀಸ್‌ಗಢ ಪೊಲೀಸರು ರಂಜನ್ ಟ್ವೀಟ್ ಗೆ ಉತ್ತರಿಸಿದರು.
ಕೇರಳದಲ್ಲಿ ತನ್ನ ಕಚೇರಿಗೆ ದಾಳಿ ಮಾಡಿದ ಎಸ್ ಎಫ್ ಐ ಕಾರ್ಯಕರ್ತರು ಮಕ್ಕಳು ಎಂದು ರಾಹುಲ್ ಗಾಂಧಿ ಹೇಳಿದ ಹೇಳಿಕೆ ತೋರಿಸಿ ಉದಯಪುರದಲ್ಲಿ ಹತ್ಯೆ ಮಾಡಿರುವವರನ್ನು ರಾಹುಲ್ ಗಾಂಧಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬರ್ಥದಲ್ಲಿ ರೋಹಿತ್ ಝೀ ನ್ಯೂಸ್ ನ ಡಿಎನ್‌ಎ ಕಾರ್ಯಕ್ರಮದಲ್ಲಿ ಹೇಳಿದ್ದರು. ವಿವಾದಿತ ನಿರೂಪಕ ಸುಧೀರ್ ಚೌಧರಿ ಅವರು ನಡೆಸುತ್ತಿದ್ದ ಡಿಎನ್‌ಎ ಕಾರ್ಯಕ್ರಮವನ್ನು ಅವರು ರಾಜೀನಾಮೆ ನೀಡಿದ ಬಳಿಕ ರೋಹಿತ್ ರಂಜನ್ ನಡೆಸಿಕೊಡುತ್ತಿದ್ದಾರೆ.
ರಾಜ್ಯವರ್ಧನ್ ರಾಥೋಡ್ ಅವರಂತಹ ಬಿಜೆಪಿ ನಾಯಕರು ರೋಹಿತ್ ರಂಜನ್ ನಡೆಸಿಕೊಡುತ್ತಿದ್ದ ಡಿಎನ್ ಎ ಕಾರ್ಯಕ್ರಮದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ರಾಥೋಡ್ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.
ಡಿಎನ್‌ಎ ಶೋನಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಉದಯ್‌ಪುರ ಘಟನೆಗೆ ಲಿಂಕ್ ಮಾಡಿದ್ದಕ್ಕೆ ನಮ್ಮ ತಂಡವು ಕ್ಷಮೆಯಾಚಿಸುತ್ತದೆ ಎಂದು ಝಿ ವಾಹಿನಿ ಹೇಳಿಕೆ ನೀಡಿತ್ತು.