ಎರಡು ಗಂಟೆಗೂ ಹೆಚ್ಚು ಕಾಲ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಚಾರಣೆ ನಡೆಸಿದ ದಿಲ್ಲಿ ಪೊಲೀಸರು

Update: 2022-07-05 07:59 GMT

ಹೊಸದಿಲ್ಲಿ: ಮಾರ್ಚ್ ತಿಂಗಳಿನಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ದಿಲ್ಲಿ ಪೊಲೀಸರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರಶ್ನಿಸಿದ್ದಾರೆ. ಆ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು  ಪೊಲೀಸ್ ಬ್ಯಾರಿಕೇಡುಗಳನ್ನು ಮುರಿದು ಆತಂಕ ಸೃಷ್ಟಿಸಿದ್ದರು.

ತೇಜಸ್ವಿ ಸೂರ್ಯ ಅವರನ್ನು 10 ದಿನಗಳ ಹಿಂದೆ ಪ್ರಶ್ನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೂರ್ಯ ಅವರ ಅಶೋಕ್ ರಸ್ತೆಯಲ್ಲಿರುವ ಅಧಿಕೃತ ನಿವಾಸದಲ್ಲಿ ಜೂನ್ ಕೊನೆಯ  ವಾರದಲ್ಲಿ  ಅವರನ್ನು ಪ್ರಶ್ನಿಸಲಾಗಿತ್ತು ಹಾಗೂ ಕೇಜ್ರಿವಾಲ್ ನಿವಾಸದ ಹೊರಗಿನ ಪ್ರತಿಭಟನೆಗಳ ಸೀಸಿಟಿವಿ ದೃಶ್ಯಗಳನ್ನು  ತೋರಿಸಲಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಯುವ ಮೋರ್ಚಾದ ಎಂಟು ಸದಸ್ಯರನ್ನು ಬಂಧಿಸಲಾಗಿತ್ತು. ತೇಜಸ್ವಿ ಸೂರ್ಯ ಅವರು ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಅರವಿಂದ್ ಕೇಜ್ರಿವಾಲ್ ಅವರು ವಿವಾದಿತ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್ ಕುರಿತು ನೀಡಿದ ಹೇಳಿಕೆ ವಿರೋಧಿಸಿ ಈ ಪ್ರತಿಭಟನೆ ನಡೆದಿತ್ತು. ಈ ಸಂದರ್ಭ ಪ್ರತಿಭಟನಾಕಾರರು ಬ್ಯಾರಿಕೇಡುಗಳನ್ನು ದೂರಿ, ಗೇಟುಗಳಿಗೆ ಪೈಂಟ್ ಎಸೆದು ಸೀಸಿಟಿವಿ ಕ್ಯಾಮರಾವನ್ನು ಪುಡಿಗಟ್ಟಿದ್ದರು.

ಪ್ರತಿಭಟನಾ ಸ್ಥಳದಲ್ಲಿ ಕಾಣಿಸಿಕೊಂಡಿದ್ದ ತೇಜಸ್ವಿ ಸೂರ್ಯ ಅವರಿಗೆ ನಂತರ ಪೊಲಿಸರು  ನೋಟಿಸ್ ನೀಡಿದ್ದರು. ತಾವು ದಿಲ್ಲಿಯಲ್ಲಿರುವ ಸಂದರ್ಭ ಪೊಲೀಸರು ತನ್ನನ್ನು ಈ ವಿಷಯವಾಗಿ ಪ್ರಶ್ನಿಸಬಹುದು ಎಂದು ತೇಜಸ್ವಿ ಸೂರ್ಯ ಹೇಳಿದ್ದರು.

ಚುನಾವಣೆಯಲ್ಲಿ ಕೇಜ್ರಿವಾಲ್ ಅವರನ್ನು ಸೋಲಿಸಲು ಸಾಧ್ಯವಾಗದ ಬಿಜೆಪಿ ಕಾರ್ಯಕರ್ತರು ಅವರ ಹತ್ಯೆಗೆ ಯತ್ನಿಸಿದ್ದಾರೆ ಎಂದು ಘಟನೆ ನಂತರ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದರು.

``ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕೆಂದು ಅವರು ಹೇಳುತ್ತಿದ್ದಾರೆ. ಹಾಗಿದ್ದರೆ ಅದನ್ನು ಯುಟ್ಯೂಬ್‍ನಲ್ಲಿ ಉಚಿತವಾಗಿ ಹಾಕಿ,''ಎಂದು ಕೇಜ್ರಿವಾಲ್ ಹೇಳಿದ್ದು ಬಿಜೆಪಿಗರಿಗೆ ಹಿಡಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News