×
Ad

ಕಾಳಿ ಪೋಸ್ಟರ್ ವಿವಾದ: ಚಿತ್ರ ತಯಾರಕಿ ಮಣಿಮೇಘಲೈ ವಿರುದ್ಧ ದಿಲ್ಲಿ, ಉತ್ತರ ಪ್ರದೇಶ ಪೊಲೀಸರಿಂದ ಎಫ್‍ಐಆರ್

Update: 2022-07-05 13:32 IST
Photo: Wikipedia

ಹೊಸದಿಲ್ಲಿ,ಜು.5: ತನ್ನ ನೂತನ ಸಾಕ್ಷಚಿತ್ರ ‘ಕಾಳಿ’ಯ ಪೋಸ್ಟರ್ನೊಂದಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಆರೋಪದಲ್ಲಿ ಚಿತ್ರನಿರ್ಮಾಪಕಿ ಲೀನಾ ಮಣಿಮೇಘಲೈ ವಿರುದ್ಧ ದಿಲ್ಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.

ಐಪಿಸಿಯ 153ಎ ಮತ್ತು 295ಎ ಕಲಮ್ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಕೆನಡಾ ನಿವಾಸಿಯಾಗಿರುವ ಮಣಿಮೇಘಲೈ ವಿರುದ್ಧ ಹಿಂದು ದೇವರ ಅಗೌರವದ ಚಿತ್ರಣಕ್ಕಾಗಿ ಕ್ರಿಮಿನಲ್ ಒಳಸಂಚು,ಪೂಜಾಸ್ಥಳದಲ್ಲಿ ಅಪರಾಧ,ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಶಾಂತಿಭಂಗಕ್ಕೆ ಪ್ರಚೋದನೆಯ ಉದ್ದೇಶದ ಆರೋಪಗಳಡಿ ಉ.ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 ಟೊರೊಂಟೊದ ಆಗಾಖಾನ್ ಮ್ಯೂಸಿಯಮ್ನಲ್ಲಿ ‘ಅಂಡರ್ ದಿ ಟೆಂಟ್’ ಯೋಜನೆಯ ಭಾಗವಾಗಿ ಪ್ರದರ್ಶಿಸಲಾಗಿರುವ ವಿವಾದಾತ್ಮಕ ಕಾಳಿ ಪೋಸ್ಟರ್ ಬಗ್ಗೆ ಕೆನಡಾದಲ್ಲಿಯ ಹಿಂದು ಸಮುದಾಯದ ನಾಯಕರಿಂದ ದೂರುಗಳನ್ನು ತಾನು ಸ್ವೀಕರಿಸಿದ್ದೇನೆ ಎಂದು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿರುವ ಒಟ್ಟಾವಾದಲ್ಲಿಯ ಭಾರತೀಯ ರಾಯಭಾರಿ ಕಚೇರಿಯು,ಇಂತಹ ಎಲ್ಲ ಪ್ರಚೋದನಾತ್ಮಕ ವಸ್ತುಗಳನ್ನು ಹಿಂದೆಗೆದುಕೊಳ್ಳುವಂತೆ ಕೆನಡಾದ ಅಧಿಕಾರಿಗಳು ಮತ್ತು ಕಾರ್ಯಕ್ರಮದ ಸಂಘಟಕರಿಗೆ ಒತ್ತಾಯಿಸಿದೆ.

ಕಳೆದ ಶನಿವಾರ ತನ್ನ ಇತ್ತೀಚಿನ ಸಾಕ್ಷಚಿತ್ರ ಕಾಳಿಯ ಪೋಸ್ಟರ್ ಅನ್ನು ಟ್ವೀಟಿಸಿದ ಬಳಿಕ ಮಣಿಮೇಘಲೈ ಆನ್‌ಲೈನ್ ನಲ್ಲಿ ಟೀಕೆಗಳಿಗೆ ಗುರಿಯಾಗಿದ್ದರು. ಹಿಂದು ದೇವತೆ ಕಾಳಿಯಂತೆ ಉಡುಪುಗಳನ್ನು ಧರಿಸಿದ ಮಹಿಳೆ ಸಿಗರೇಟ್ ಸೇದುತ್ತಿರುವುದನ್ನು ಮತ್ತು ಕೈಯಲ್ಲಿ ಎಲ್ಜಿಬಿಟಿ ಸಮುದಾಯವನ್ನು ಪ್ರತಿನಿಧಿಸುವ ಧ್ವಜವನ್ನು ಹಿಡಿದುಕೊಂಡಿರುವುದನ್ನು ಪೋಸ್ಟರ್ ತೋರಿಸಿದೆ.

ಕಾಳಿ ಪೋಸ್ಟರ್ ಆನ್ಲೈನ್ನಲ್ಲಿ ತೀವ್ರ ಆಕ್ರೋಶ ಸೃಷ್ಟಿಸಿದ್ದು, ಮಣಿಮೇಘಲೈ ಅವರನ್ನು ಬಂಧಿಸುವಂತೆ ಹಲವರು ಆಗ್ರಹಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಗಳು ವ್ಯಕ್ತವಾದ ಬಳಿಕ ಮಣಿಮೇಖಲೆ ‘ಒಂದು ಸಂಜೆ ಕಾಳಿ ಕಾಣಿಸಿಕೊಂಡು ಟೊರೊಂಟೊದ ರಸ್ತೆಗಳಲ್ಲಿ ಅಡ್ಡಾಡಿದಾಗ ನಡೆಯುವ ಘಟನೆಗಳನ್ನು ಚಿತ್ರವು ಕೇಂದ್ರೀಕರಿಸಿದೆ. ನೀವು ಚಿತ್ರವನ್ನು ವೀಕ್ಷಿಸಿದರೆ ನನ್ನ ಪ್ರಯತ್ನವನ್ನು ಮೆಚ್ಚಿಕೊಳ್ಳುತ್ತೀರಿ ’ಎಂದು ಟ್ವೀಟಿಸಿದ್ದಾರೆ.

‘ನಾನು ಕಳೆದುಕೊಳ್ಳುವುದು ಏನೂ ಇಲ್ಲ. ನನ್ನ ಧ್ವನಿ ಇರುವವರೆಗೂ ಯಾವುದಕ್ಕೂ ಹೆದರದೆ ಮಾತನಾಡಲು ನಾನು ಬಯಸುತ್ತೇನೆ. ಅದಕ್ಕೆ ಬೆಲೆ ನನ್ನ ಜೀವವಾಗಿದ್ದರೆ ಅದನ್ನು ನಾನು ನೀಡುತ್ತೇನೆ ’ಎಂದು ಮಣಿಮೇಖಲೈ ಇನ್ನೊಂದು ಟ್ವಿಟ್ನಲ್ಲಿ ಹೇಳಿದ್ದಾರೆ.
ಕಳೆದ ವಾರಾಂತ್ಯ ಆಗಾಖಾನ್ ಮ್ಯೂಝಿಯಮ್ನಲ್ಲಿ ಬಹುಸಂಸ್ಕೃತಿ ಆಚರಣೆಯ ಉತ್ಸವ ‘ರಿದಮ್ಸ್ ಆಫ್ ಕೆನಡಾ’ದಲ್ಲಿ ಮೊದಲ ಬಾರಿಗೆ ಕಾಳಿ ಚಿತ್ರವನ್ನು ಪ್ರದರ್ಶಿಸಲಾಗಿತ್ತು.
ತಮಿಳುನಾಡಿನ ವಿರುಧನಗರದ ಮಹಾರಾಜಾಪುರಂ ಗ್ರಾಮಕ್ಕೆ ಸೇರಿದ ಮಣಿಮೇಖಲೈ ತನ್ನ ‘ಮಾಡಾತಿ’ ಮತ್ತು ‘ಸೆಂಗಾದಲ್-ದಿ ಡೆಡ್ ಸೀ’ ಚಿತ್ರಗಳಿಗಾಗಿ ಅಂತರರಾಷ್ಟ್ರೀಯ ಪ್ರಶಂಸೆಗೆ ಪಾತ್ರರಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News