ಝೀಟಿವಿ ನಿರೂಪಕನ ಬಂಧನಕ್ಕೆ ಛತ್ತೀಸ್‌ಗಢ ಪೊಲೀಸರು ಬಂದರೂ, ವಶಕ್ಕೆ ಪಡೆದುಕೊಂಡಿದ್ದು ಉತ್ತರಪ್ರದೇಶ ಪೊಲೀಸರು !

Update: 2022-07-05 11:43 GMT

ಗಾಝಿಯಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ವಯನಾಡ್ ಕಚೇರಿಯಲ್ಲಿ ನಡೆದ ದಾಂಧಲೆ ಕುರಿತು ನೀಡಿದ್ದ ಪ್ರತಿಕ್ರಿಯೆಯನ್ನು ಅವರು ಉದಯಪುರ್ ಟೈಲರ್ ಹತ್ಯೆ ಸಂಬಂಧ ನೀಡಿದ ಪ್ರತಿಕ್ರಿಯೆ ಎಂದು ಬಣ್ಣಿಸಿ ಸುದ್ದಿ ಪ್ರಸಾರ ಮಾಡಿದ್ದ ಝೀ ಸುದ್ದಿ ನಿರೂಪಕ ರೋಹಿತ್ ರಂಜನ್ ಅವರ ಗಾಝಿಯಾಬಾದ್‍ನ ಇಂದಿರಾಪುರಂ ಪ್ರದೇಶದಲ್ಲಿರುವ  ನಿವಾಸಕ್ಕೆ ಇಂದು ಬೆಳಿಗ್ಗೆ ಛತ್ತೀಸಗಢ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಆಗಮಿಸಿದ್ದರೂ, ಅಂತಿಮವಾಗಿ ಅವರನ್ನು ನೊಯ್ಡಾ ಪೊಲೀಸರು ತಮ್ಮ ವಶಕ್ಕೆ ಪಡೆದ ಘಟನೆ ನಡೆದಿದೆ.

ಕಾಂಗ್ರೆಸ್ ಆಡಳಿತವಿರುವ ಛತ್ತೀಸಗಢದ ಪೊಲೀಸ್ ತಂಡ ಹಾಗೂ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಪೊಲೀಸ್ ತಂಡ ಸರಿಸುಮಾರು ಒಂದೇ ಸಮಯಕ್ಕೆ ರೋಹಿತ್ ರಂಜನ್ ಅವರ ನಿವಾಸದಲ್ಲಿದ್ದವು.

ಆದರೆ ಅಂತಿಮವಾಗಿ ನೊಯ್ಡಾ ಪೊಲೀಸರೇ ಅವರನ್ನು ವಶಪಡಿಸಿಕೊಂಡಿದ್ದಾರೆ. ಅವರದ್ದೇ ವಾಹಿನಿ ನೀಡಿದ್ದ ದೂರಿನ ಆಧಾರದಲ್ಲಿ ಸೆಕ್ಷನ್ 505 ಅನ್ವಯ ಪ್ರಕರಣ ದಾಖಲಿಸಿ ನೊಯ್ಡಾ ಸೆಕ್ಟರ್ 20 ಪೊಲೀಸರು ಅವರನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅತ್ತ ಛತ್ತೀಸಗಢದಲ್ಲಿ ಕಾಂಗ್ರೆಸ್ ಶಾಸಕ ದೇವೇಂದ್ರ ಯಾದವ್ ಅವರು ರೋಹಿತ್ ರಂಜನ್ ವಿರುದ್ಧ ದೂರು ನೀಡಿದ್ದರು.

ರಾಹುಲ್ ಅವರು ತಮ್ಮ ವಯನಾಡ್ ಕಚೇರಿ ಮೇಲೆ ದಾಳಿ ನಡೆಸಿದವರನ್ನು ಮಕ್ಕಳು ಎಂದು ಸಂಬೋಧಿಸಿದ್ದರಿಂದ ಅದನ್ನೇ ಬಳಸಿಕೊಂಡು ಉದಯಪುರ್ ಟೈಲರ್ ಹಂತಕರನ್ನು ಮಕ್ಕಳು ಎಂದಿದ್ದಾರೆಂದು ತಪ್ಪಾಗಿ ಅರ್ಥ ನೀಡುವ ರೀತಿಯಲ್ಲಿ ಝೀ ನಿರೂಪಕ ಸುದ್ದಿ ಪ್ರಸಾರ ಮಾಡಿದ್ದರು ಎಂದು ಯಾದವ್ ತಮ್ಮ ದೂರಿನಲ್ಲಿ ಹೇಳಿದ್ದರು.

ಛತ್ತೀಸಗಢ ಪೊಲೀಸರು ತಮ್ಮ ನಿವಾಸದ ಹೊರಗಿದ್ದಾರೆ ಎಂಬ ಕುರಿತು ಟ್ವೀಟ್ ಮಾಡಿ ತಿಳಿಸಿದ್ದ ರೋಹಿತ್ ರಂಜನ್, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಬರುವುದು ಸರಿಯೇ ಎಂದು ಪ್ರಶ್ನಿಸಿ ಉತ್ತರ ಪ್ರದೇಶ ಸೀಎಂ ಯೋಗಿ ಆದಿತ್ಯನಾಥ್ ಅವರನ್ನೂ ಟ್ಯಾಗ್ ಮಾಡಿದ್ದರು.

ಛತ್ತೀಸಗಢ ಪೊಲೀಸರ ಬಳಿ ರಾಯಪುರ್‍ನಲ್ಲಿ ದಾಖಲಿಸಲಾಗಿದ್ದ ಪ್ರಕರಣದ ಆಧಾರದಲ್ಲಿ ಅರೆಸ್ಟ್ ವಾರಂಟ್ ಇತ್ತು. ಜುಲೈ 2ರಂದು ವಿವಾದಿತ ವೀಡಿಯೋ ಹಾಗೂ ಸುದ್ದಿ ಪ್ರಸಾರಗೊಂಡಿದ್ದರೆ ಮರುದಿನವೇ ರೋಹಿತ್ ರಂಜನ್ ಅವರು ಕ್ಷಮೆ ಕೋರಿದ್ದರು.

ಛತ್ತೀಸಗಢದಲ್ಲಿ ಬಿಲಾಸ್ಪುರ್‍ನಲ್ಲಿ ಕೂಡ ಪ್ರಕರಣ ದಾಖಲಾಗಿದ್ದು ರಾಜಸ್ಥಾನದಲ್ಲೂ ಅವರ ವಿರುದ್ಧ ದೂರುಗಳು ಬಂದಿವೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News