×
Ad

ಬಂಧಿತ ಭಯೋತ್ಪಾದಕ ಬಿಜೆಪಿ ಸದಸ್ಯನಲ್ಲ, ಆತ ಪತ್ರಕರ್ತನ ವೇಷದಲ್ಲಿ ಕಚೇರಿಗೆ ಬರುತ್ತಿದ್ದ: ರವೀಂದರ್ ರೈನಾ

Update: 2022-07-05 16:01 IST

ಹೊಸದಿಲ್ಲಿ: ಬಂಧಿತ ಎಲ್ ಇಟಿ  ಭಯೋತ್ಪಾದಕ ತಾಲಿಬ್ ಹುಸೇನ್‌ನಿಂದ  ಅಂತರ ಕಾಯ್ದುಕೊಂಡಿರುವ ಬಿಜೆಪಿ ಆತ  ಪಕ್ಷದ ಜಮ್ಮು-ಕಾಶ್ಮೀರ ಘಟಕದ ಸದಸ್ಯನಾಗಿದ್ದ ಎಂಬ  ವಿಚಾರವನ್ನು  ನಿರಾಕರಿಸಿದೆ.

ತಾಲಿಬ್ ಹುಸೇನ್ ನನ್ನು ರವಿವಾರ ರಿಯಾಸಿ ಜಿಲ್ಲೆಯಲ್ಲಿ ಮತ್ತೊಬ್ಬ ಎಲ್ಇಟಿ ಉಗ್ರನೊಂದಿಗೆ ಬಂಧಿಸಲಾಗಿತ್ತು. ಹುಸೇನ್ ಬಿಜೆಪಿಯಲ್ಲಿದ್ದ ಎಂದು ಹೇಳಲಾಗಿದ್ದು, ಈತ ಜಮ್ಮು ಪ್ರಾಂತ್ಯದ ಅಲ್ಪಸಂಖ್ಯಾತ ಮೋರ್ಚಾದ ಐಟಿ ಹಾಗೂ  ಸಾಮಾಜಿಕ ಮಾಧ್ಯಮ ಸೆಲ್‌ನ ಉಸ್ತುವಾರಿಯನ್ನಾಗಿ  ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಕೇವಲ 18 ದಿನಗಳ ಕಾಲ  ಪಕ್ಷದ ಸದಸ್ಯನಾಗಿದ್ದ ಹುಸೇನ್ ಈ ವರ್ಷದ ಮೇ ತಿಂಗಳಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾನೆ  ಎಂದು ಬಿಜೆಪಿ  ಆರಂಭದಲ್ಲಿ ಹೇಳಿಕೊಂಡಿತ್ತು. ಆತ  ಯಾವುದೇ ಹುದ್ದೆಯ ಮೂಲಕ  ಪಕ್ಷದೊಂದಿಗೆ ನೇರವಾಗಿ ಸಂಬಂಧ ಹೊಂದಿರಲಿಲ್ಲ ಎಂದು ಜಮ್ಮು-ಕಾಶ್ಮೀರದ  ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ  ಈಗ ಹೇಳಿದ್ದಾರೆ.

“ತಾಲಿಬ್ ಹುಸೇನ್ ಬಿಜೆಪಿಯ ಸದಸ್ಯನೂ ಆಗಿರಲಿಲ್ಲ. ಆತ  ಪತ್ರಕರ್ತನ  ವೇಷದಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡುತ್ತಿದ್ದ’’  ಎಂದು ರೈನಾ ‘ಇಂಡಿಯಾ ಟುಡೇ’ಗೆ ತಿಳಿಸಿದ್ದಾರೆ.

ಹುಸೇನ್ ಹಿಟ್-ಲಿಸ್ಟ್‌ನಲ್ಲಿ ಜಮ್ಮು-ಕಾಶ್ಮೀರದ  ಬಿಜೆಪಿಯ ಉನ್ನತ ನಾಯಕರು ಹಾಗೂ  ಕಚೇರಿಯ ಅಧಿಕಾರಿಗಳು ಇದ್ದಾರೆ ಎಂದು ಆರೋಪಿಸಿರುವ ರೈನಾ, ಈ ವಿಷಯದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News