×
Ad

ʼಪುಷ್ಪ: ದಿ ರೈಸ್‌ʼ ಚಿತ್ರತಂಡಕ್ಕೆ ವಿಜಯ್‌ ಸೇತುಪತಿ ಸೇರ್ಪಡೆ? ಅಭಿಮಾನಿಗಳಲ್ಲಿ ಗರಿಗೆದರಿದ ಕುತೂಹಲ!

Update: 2022-07-05 18:41 IST
Photo: twitter/KeralaTrends2

ಹೈದರಾಬಾದ್:‌ ತೆಲುಗಿನ ಸ್ಟೈಲಿಷ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರ ಪ್ಯಾನ್ ಇಂಡಿಯಾ ಚಿತ್ರ ಸರಣಿಯಾದ ʼಪುಷ್ಪ: ದಿ ರೂಲ್ʼ‌ ನಲ್ಲಿ ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ ಕೂಡಾ ಅಭಿನಯಿಸಲಿದ್ದಾರೆ ಎಂದು ವರದಿಯಾಗಿದೆ.‌ ಖ್ಯಾತ ಸಿನೆಮಾ ಪತ್ರಕರ್ತ ರಮೇಶ್‌ ಬಾಲನ್‌ ಕೂಡಾ ಈ ಸುದ್ದಿಯನ್ನು ಧೃಡೀಕರಿಸಿದ್ದಾರೆ. 

ʼಪುಷ್ಪ: ದಿ ರೈಸ್‌ʼ ಚಿತ್ರದಲ್ಲಿ ಪ್ರತಿಭಾವಂತ ನಟ ಫಹದ್‌ ಫಾಸಿಲ್‌ ನಿರ್ವಹಿಸಿದ್ದ   ಭನ್ವರ್ ಸಿಂಗ್ ಶೇಖಾವತ್ ಎಂಬ ಪೋಲೀಸ್ ಪಾತ್ರಕ್ಕೆ  ವಿಜಯ್ ಸೇತುಪತಿ ಅವರನ್ನು ಮೊದಲು ಸಂಪರ್ಕಿಸಲಾಗಿತ್ತು. ಆದರೆ, ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದ ಸೇತುಪತಿ ಚಿತ್ರಕ್ಕೆ ಸಹಿ ಹಾಕಿರಲಿಲ್ಲ. ಹಾಗಾಗಿ, ಫಹದ್‌ ಫಾಸಿಲ್‌ ಅವರನ್ನು ಚಿತ್ರಕ್ಕೆ ಕರೆ ತರಲಾಗಿತ್ತು. ಆದರೆ, ಇದೀಗ ಬಂದಿರುವ ಸಿನೆಮಾ ವಲಯದ ಮಾತುಗಳ ಪ್ರಕಾರ ವಿಜಯ್‌ ಸೇತುಪತಿ ಚಿತ್ರದ ಮುಂದಿನ ಭಾಗದಲ್ಲಿ ನಿರ್ಣಾಯಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿರುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಚಿತ್ರದ ನಿರ್ಮಾಪಕರು ಸೇತುಪತಿಯನ್ನು ಸಂಪರ್ಕಿಸಿದ್ದಾರೆ ಎಂದು ಚಿತ್ರರಂಗದ ಸುದ್ದಿ ಮಾಧ್ಯಮಗಳು ವರದಿಯನ್ನು ಮಾಡಿದೆ.

 ವರದಿಗಳ ಪ್ರಕಾರ, ವಿಜಯ್ ಸೇತುಪತಿ ಚಿತ್ರದಲ್ಲಿ ಪುಷ್ಪ ರಾಜ್ (ಅಲ್ಲು ಅರ್ಜುನ್) ನಿರ್ಮಿಸಿದ ಸಾಮ್ರಾಜ್ಯವನ್ನು ನಾಶಪಡಿಸುವ ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪುಷ್ಪ ರಾಜ್‌ಗೆ ತೊಂದರೆ ಉಂಟುಮಾಡಲು ಫಹದ್ ಫಾಸಿಲ್ ಪಾತ್ರವು (ಭನ್ವರ್ ಸಿಂಗ್ ಶೇಖಾವತ್) ಸೇತುಪತಿಯ ಪಾತ್ರದೊಂದಿಗೆ ಕೈಜೋಡಿಸಲಿದೆ. ಕಮಲ್‌ ಹಾಸನ್‌ ಅಭಿನಯದ ʼವಿಕ್ರಮ್‌ʼ ಚಿತ್ರದ ವೀಕ್ಷಿಸಿದ ಬಳಿಕ ಈ ಐಡಿಯಾ ನಿರ್ದೇಶಕ ಸುಕುಮಾರ್‌ ಗೆ ಬಂದಿದೆ ಎಂದು ಹೇಳಲಾಗಿದೆ. ವಿಕ್ರಮ ಚಿತ್ರದಲ್ಲಿ ಡ್ರಗ್ ಮಾಫಿಯಾ ಡಾನ್‌ ಆಗಿ ವಿಜಯ್‌ ಸೇತುಪತಿ ನಟಿಸಿದ್ದರು. 

ಚಿತ್ರತಂಡ ಮೂಲದ ಪ್ರಕಾರ, ಪುಷ್ಪ ದಿ ರೂಲ್‌ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ. ಚಿತ್ರೀಕರಣವು ಸುದೀರ್ಘ ಆರು ತಿಂಗಳುಗಳ ಕಾಲ ನಡೆಯಲಿದೆ. ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ದುಬಾರಿ ಖರ್ಚಿನಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಿದೆ.  2023 ರ 2 ನೇ ಅರ್ಧಭಾಗದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡವು ಯೋಜಿಸಿದೆ ಎಂದು pinkvilla.com ವರದಿ ಮಾಡಿದೆ.

ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್‌, ಫಹದ್‌ ಫಾಸಿಲ್‌ ಜೊತೆಗೆ ವಿಜಯ್‌ ಸೇತುಪತಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದು, ಟ್ವಿಟರಿನಲ್ಲಿ ಫ್ಯಾನ್‌ ಮೇಡ್‌ ಪೋಸ್ಟರ್‌ ರಚಿಸಿ ಸಂಭ್ರಮಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News