ಬಿಜೆಪಿಗೆ ಉಗ್ರರ ನಂಟು: ಕಾಂಗ್ರೆಸ್ ಆರೋಪ
Update: 2022-07-05 23:32 IST
ಹೊಸದಿಲ್ಲಿ, ಜು. 5: ಉದಯಪುರದ ಕ್ರೂರ ಹತ್ಯೆ ಪ್ರಕರಣದ ಆರೋಪಿಗಳು ಹಾಗೂ ಲಷ್ಕರೆ ತಯ್ಯಿಬದ ಭಯೋತ್ಪಾದಕರೊಂದಿಗೆ ನಂಟಿನ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಂಗಳವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ರಾಷ್ಟ್ರೀಯತೆ ಬಗ್ಗೆ ಭಾರತೀಯರಿಗೆ ಬೋಧಿಸುವ ಅವಕಾಶವನ್ನು ಕಳೆದುಕೊಳ್ಳಲು ಬಯಸದ ಬಿಜೆಪಿಯ ಸದಸ್ಯರು ಹಿಂಸಾತ್ಮಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಆಘಾತ ಉಂಟು ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ.
ಬಿಜೆಪಿಯ ನಕಲಿ ರಾಷ್ಟ್ರೀಯತೆ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ ಸರಸವಾಡುವ ಆತಂಕಕಾರಿ ಇಚ್ಛೆಯನ್ನು ಜನರು ಗಮನಿಸಬೇಕು ಎಂದು ಕಾಂಗ್ರೆಸ್ ಜನರಲ್ಲಿ ಮನವಿ ಮಾಡಿದೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ರವಿವಾರ ಸೆರೆಯಾದ ಲಷ್ಕರೆ ತಯ್ಯಿಬದ ಉಗ್ರ ಬಿಜೆಪಿಯ ಸಕ್ರಿಯ ಸದಸ್ಯ ಹಾಗೂ ಜಮ್ಮುವಿನಲ್ಲಿ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ಸಾಮಾಜಿಕ ಜಾಲ ತಾಣದ ಉಸ್ತುವಾರಿ ಎಂದು ಬೆಳಕಿಗೆ ಬಂದ ಬಳಿಕ ಕಾಂಗ್ರೆಸ್ ಈ ಟೀಕೆ ಮಾಡಿದೆ.