'ಜವಾನ್‌' ನಲ್ಲಿ ಶಾರೂಖ್‌ ಖಾನ್‌ ಗೆ ವಿಜಯ್‌ ಸೇತುಪತಿ ವಿಲನ್ ?

Update: 2022-07-06 12:47 GMT
ವಿಜಯ್ ಸೇತುಪತಿ (Photo: Vijay Sethupathi/Instagram)

ಮುಂಬೈ: ಬಾಲಿವುಡ್‌ ಬಾದ್‌ಶಾ ಶಾರೂಖ್‌ ಖಾನ್‌ ಅವರ ಬಹು ನಿರೀಕ್ಷಿತ ʼಜವಾನ್‌ʼ ಚಿತ್ರದಲ್ಲಿ ʼಮಕ್ಕಳ್‌ ಸೆಲ್ವನ್‌ ವಿಜಯ್‌ ಸೇತುಪತಿʼ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಮೂಲಗಳುನ್ನು ಉಲ್ಲೇಖಿಸಿ pinkvilla ವರದಿ ಮಾಡಿದೆ. 

ತಮಿಳಿನಲ್ಲಿ ಸತತ ಹಿಟ್‌ ಚಿತ್ರಗಳನ್ನು ನೀಡಿರುವ ʼರಾಜಾ-ರಾಣಿʼ ಖ್ಯಾತಿಯ ನಿರ್ದೇಶಕ ಅಟ್ಲೀ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಪ್ಯಾನ್‌ ಇಂಡಿಯಾ ಚಿತ್ರಗಳ ಮೂಲಕ ದಕ್ಷಿಣ ಭಾರತೀಯ ಚಿತ್ರಗಳು ಭಾರತದಾದ್ಯಂತ ಗಮನ ಸೆಳೆದಿದ್ದು, ಬಾಲಿವುಡ್-ಕಾಲಿವುಡ್‌ ಸಂಗಮದ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. 

ದಕ್ಷಿಣ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಲೇಡಿ ನಯನತಾರ ಈ ಚಿತ್ರದಲ್ಲಿ ನಾಯಕಿಯಾಗಿರುತ್ತಾರೆ. ಖಳನ ಪಾತ್ರಕ್ಕೆ ವಿಜಯ್‌ ಸೇತುಪತಿಯ ಡೇಟ್ಸ್‌ ಸಿಕ್ಕಿಬಿಟ್ಟರಂತೂ ದಕ್ಷಿಣ ಭಾರತದ ಅದರಲ್ಲೂ ತಮಿಳಿನ ಪ್ರಮುಖ ಕಲಾವಿದರು ಈ ಚಿತ್ರದ ಭಾಗವಾಗಲಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್‌ ಅಬ್ರಹಾಮ್‌ ಕೂಡಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಈಗಾಗಲೇ ವರದಿಯಾಗಿತ್ತು. 

'ಝೀರೋ' ಚಿತ್ರದ ಸೋಲಿನ ಬಳಿಕ ದೊಡ್ಡ ಮಟ್ಟದ ಹಿಂತಿರುಗುವಿಕೆಗೆ ಕಾಯುತ್ತಿರುವ ಶಾರೂಖ್‌ ʼಜವಾನ್‌ʼ ಗೂ ಮುನ್ನ ʼಪಠಾಣ್‌ʼ ಮೂಲಕ ಅದೃಷ್ಟ ಪರೀಕ್ಷಿಸಲಿದ್ದಾರೆ.  2023 ರ ಜನವರಿಯಲ್ಲಿ ಪಠಾಣ್‌ ಬಿಡುಗಡೆಗೆ ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಅದೇ ವರ್ಷದ ಜೂನ್‌ ನಲ್ಲಿ ಜವಾನ್‌ ತೆರೆ ಕಾಣಲಿದೆ ಎಂದು ಹೇಳಲಾಗಿದೆ.

ಅದಾಗ್ಯೂ, ವಿಜಯ್‌ ಸೇತುಪತಿ ಚಿತ್ರದಲ್ಲಿ ನಟಿಸುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. "ಸೇತುಪತಿ ಅವರು ಜವಾನ್ ತಯಾರಕರೊಂದಿಗೆ ಖಳನಾಯಕನ ಪಾತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಇನ್ನೂ ಯಾವುದೂ ಅಧಿಕೃತವಾಗಿಲ್ಲ. ಅವರು ಇನ್ನೂ ಚಿತ್ರಕ್ಕೆ ಒಪ್ಪಿಗೆ ನೀಡಿಲ್ಲ, ಆದ್ದರಿಂದ ಅವರು ಮುಂಬೈನಲ್ಲಿ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಸೇರುವ ಬಗ್ಗೆ ಯಾವುದೇ ಸತ್ಯವಿಲ್ಲ” ಎಂದು ಮೂಲಗಳು ಹೇಳಿವೆ. 

ತೆಲುಗಿನ 'ಉಪೆನ್ನ', ದಳಪತಿ ವಿಜಯ್‌ ಅಭಿನಯದ ʼಮಾಸ್ಟರ್‌ʼ, ಕಮಲ್‌ ಹಾಸನ್‌ ಅಭಿನಯದ ʼವಿಕ್ರಮ್‌ʼ ಮೊದಲಾದ ಚಿತ್ರಗಳಲ್ಲಿ ಈಗಾಗಲೇ ಮಾಸ್‌ ವಿಲನ್‌ ಆಗಿ ವಿಮರ್ಷಕರ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ವಿಜಯ್‌ ಸೇತುಪತಿಗೆ ಖಳಪಾತ್ರಗಳು ಹೊಸದೇನಲ್ಲ. ಶಾರೂಖ್‌ ಖಾನ್‌ ಅವರಿಗೆ ಪ್ರತಿಸ್ಪರ್ಧಿಯಾಗಿ ನಟಿಸುವ ಪಾತ್ರವನ್ನು ಡೇಟ್ಸ್‌ ಸರಿಹೊಂದಿದರೆ ಅವರು ನಿರ್ವಹಿಸಬಹುದು ಎಂದು ಚಿತ್ರರಂಗದಲ್ಲಿ ಮಾತುಕತೆಗಳು ನಡೆಯುತ್ತಿದೆ. 

ಅಲ್ಲು ಅರ್ಜುನ್‌, ಫಹದ್‌ ಫಾಸಿಲ್‌ ಅಭಿನಯದ ʼಪುಷ್ಪ; ದಿ ರೂಲ್‌ʼ ಚಿತ್ರದಲ್ಲಿ ವಿಜಯ್‌ ಸೇತುಪತಿ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದೂ ವರದಿಯಾಗಿದೆ.

ಇದನ್ನೂ ಓದಿ: 'ಪುಷ್ಪ: ದಿ ರೈಸ್‌' ಚಿತ್ರತಂಡಕ್ಕೆ ವಿಜಯ್‌ ಸೇತುಪತಿ ಸೇರ್ಪಡೆ? 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News