40 ಲಕ್ಷ ಅಸ್ಸಾಮಿ ಮಾತನಾಡುವ ಮುಸ್ಲಿಮರನ್ನು ಸ್ಥಳೀಯರು ಎಂದು ಪರಿಗಣಿಸಿದ ಅಸ್ಸಾಂ ಸಂಪುಟ

Update: 2022-07-06 18:23 GMT

ದಿಸ್ಪುರ, ಜು. 6:   ಈಗ ಬಾಂಗ್ಲಾದೇಶ ಎಂದು ಕರೆಯಲಾಗುವ ಪೂರ್ವ ಪಾಕಿಸ್ತಾನದಿಂದ ವಲಸೆ ಬಂದ ಇತಿಹಾಸ ಇಲ್ಲದ, ರಾಜ್ಯದಲ್ಲಿರುವ 40 ಲಕ್ಷ ಅಸ್ಸಾಮಿ ಭಾಷೆ ಮಾತನಾಡುವ ಮುಸ್ಲಿಮರನ್ನು ಸ್ಥಳೀಯರು ಎಂದು ಅಸ್ಸಾಂ ಸಂಪುಟ ಮಂಗಳವಾರ ಪರಿಗಣಿಸಿದೆ.

ಈ ಗುಂಪನ್ನು ಈ ಹಿಂದೆ ‘‘ಸ್ಥಳೀಯ ಮುಸ್ಲಿಮರು’’ ಎಂದು ಕರೆಯಲಾಗುತ್ತಿತ್ತು. ಆದರೆ, ಅಧಿಕೃತವಾಗಿ ಗುರುತಿಸಿರಲಿಲ್ಲ. ಈ ಅನುಮೋದನೆಯೊಂದಿಗೆ ಈಗ ಸ್ಥಳೀಯ ಮುಸ್ಲಿಮರು ಹಾಗೂ ಬಂಗಾಳಿ ಮೂಲದ ಮುಸ್ಲಿಮರ ನಡುವೆ ಸ್ಪಷ್ಟವಾದ ವ್ಯತ್ಯಾಸ ಕಾಣುವಂತಾಗಿದೆ.

ಗೋರಿಯಾ, ಮೋರಿಯಾ, ದೇಶಿ, ಜುಲಾ ಹಾಗೂ ಸೈಯದ್ ಸಮುದಾಯಗಳನ್ನು ಅಸ್ಸಾಮಿ ಮುಸ್ಲಿಮರ ಉಪ ಗುಂಪು ಅಥವಾ ಸ್ಥಳೀಯ ಅಸ್ಸಾಮಿ ಮುಸ್ಲಿಮರು ಎಂದು ವರ್ಗೀಕರಿಸಬಹುದು ಎಂದು ರಾಜ್ಯ ಆರೋಗ್ಯ ಸಚಿವ ಕೇಶಬ್ ಕುಮಾರ್ ಮಹಾಂತ ಅವರು ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯಗಳು ಸೇರಿದಂತೆ ರಾಜ್ಯದಲ್ಲಿರುವ ಸ್ಥಳೀಯ ಅಲ್ಪಸಂಖ್ಯಾತರನ್ನು ವರ್ಗೀರಿಸುವತ್ತ ಕಾರ್ಯ ನಿರ್ವಹಿಸಲಾಗುವುದು   ಎಂದು ಅಸ್ಸಾಮ್ ಸರಕಾರ ಜೂನ್‌ನಲ್ಲಿ ಹೇಳಿತ್ತು. ‘‘ಈ ವಲಯದ ಸ್ಥಳೀಯ ನಿವಾಸಿಗಳನ್ನು ಗುರುತಿಸುವುದು ಅತ್ಯಗತ್ಯವಾಗಿತ್ತು’’ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋರಿಯಾ ಉನ್ನಾಯನ್ ಪರಿಷದ್‌ನ ಅಧ್ಯಕ್ಷ ಹಫೀಝುಲ್ ಅಹ್ಮದ್, ತನ್ನ ಸಂಘಟನೆ ಸಮುದಾಯಕ್ಕೆ ಪ್ರತ್ಯೇಕ ವರ್ಗೀಕರಣವನ್ನು 2006ರಿಂದಲೇ ಆಗ್ರಹಿಸುತ್ತಾ ಬಂದಿದೆ ಎಂದಿದ್ದಾರೆ.  ‘‘ಆದರೆ, ಸರಕಾರ ಇದುವರೆಗೆ ಇಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ನಾವು ಬಂಗಾಳಿ ಮಾತನಾಡುವ ಮುಸ್ಲಿಮರಿಂದ ನಿರ್ಲಕ್ಷ್ಯಕ್ಕೆ ಒಳಗಾದೆವು’’ ಎಂದು ಅವರು ತಿಳಿಸಿದ್ದಾರೆ.

ಗೊರಿಯಾ ಸಮುದಾಯಕ್ಕೆ ಸೇರಿದ ವಕೀಲ ನಾಕಿಬುರ್ ಝಮಾನ್, ಈ ಸಮುದಾಯದ ಸದಸ್ಯರು ರಾಜ್ಯದ ನಾಗರಿಕರಾಗಿದ್ದ ಹೊರತಾಗಿಯೂ ಸೌಲಭ್ಯ ಪಡೆದಿಲ್ಲ. ಇಂದಿನ ನಿರ್ಣಾಯ ನಮಗೆ ಚಾರಿತ್ರಿಕವಾದುದು. ಇದು ನಮ್ಮ ಸಮುದಾಯದ ಪ್ರತ್ಯೇಕ ಸಮೀಕ್ಷೆಗೆ ದಾರಿ ಮಾಡಿ ಕೊಡಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News