ಸ್ಟ್ಯಾನ್ ಸ್ವಾಮಿ ಸಾವಿನ ಬಗ್ಗೆ ಸ್ವತಂತ್ರ್ಯ ತನಿಖೆ: ಅಮೆರಿಕ ಸಂಸದ ಆಗ್ರಹ

Update: 2022-07-07 02:06 GMT
ಸ್ಟ್ಯಾನ್ ಸ್ವಾಮಿ (ಫೋಟೊ-wikipedia.org)

ವಾಷಿಂಗ್ಟನ್: ಮಾನವಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿಯವರ ಬಂಧನ, ಸೆರೆವಾಸ ಮತ್ತು ಸಾವಿನ ಬಗ್ಗೆ ಭಾರತ ಸರ್ಕಾರ ಸ್ವತಂತ್ರ್ಯ ತನಿಖಾ ತಂಡವನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸುವ ಮತ್ತು ಸ್ವಾಮಿಯವರ ಜೀವನವನ್ನು ಸ್ಮರಿಸುವ ನಿರ್ಣಯವನ್ನು ಅಮೆರಿಕ ಸಂಸತ್ತಿನಲ್ಲಿ ಸದಸ್ಯರೊಬ್ಬರು ಮಂಡಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಡೆಮಾಕ್ರಟಿಕ್ ಪಕ್ಷದ ಸದಸ್ಯ ಜುವಾನ್ ವರ್ಗಸ್ ಈ ಸಂಬಂಧ ಹೇಳಿಕೆ ನೀಡಿ, ಸ್ವಾಮಿಯವರ ಜೀವನವನ್ನು ಸ್ಮರಿಸುವ ನಿರ್ಣಯವನ್ನು ಮಂಡಿಸಲು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ. ಇತರ ಇಬ್ಬರು ಸದಸ್ಯರಾದ ಮೆಸಚುಸೆಟ್ಸ್ ನ ಜೇಮ್ಸ್ ಮೆಕ್ ಗಿವೆರ್ನ್ ಮತ್ತು ಇಂಡಿಯಾನಾದ ಆಂಡ್ರೆ ಕಾರ್ಸನ್ ಇದನ್ನು ಅನುಮೋದಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಸ್ವಾಮಿ ಬಂಧನಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಂದ ಟೀಕೆಗಳನ್ನು ಭಾರತ ಈ ಮೊದಲು ತಿರಸ್ಕರಿಸಿತ್ತು. ಈ ನಿರ್ಣಯವನ್ನು ಮಂಡಿಸಿದ ಮಾತ್ರಕ್ಕೆ ಅದನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಅಥವಾ ಆಂಗೀಕರಿಸಬೇಕು ಎಂಬ ನಿಯಮ ಇಲ್ಲ.

"ಫಾದರ್ ಸ್ಟ್ಯಾನ್ ಅವರು ಮಾನವಹಕ್ಕುಗಳ ಕಟ್ಟಾ ಪ್ರತಿಪಾದಕರಾಗಿದ್ದು, ಧ್ವನಿ ಇಲ್ಲದವರಿಗೆ ಧ್ವನಿ ನೀಡಲು ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದರು. ದೇಶೀಯ ಆದಿವಾಸಿ ಜನರ ಹಕ್ಕುಗಳನ್ನು ಅವರು ಪ್ರತಿಪಾದಿಸಿದ್ದರು. ಯುವ ಸಮುದಾಯ ಮುಖಂಡರನ್ನು ತರಬೇತುಗೊಳಿಸಿದರು ಮತ್ತು ಭಾರತದ ಹಲವು ದಮನಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸಲು ಶ್ರಮಿಸಿದ್ದರು" ಎಂದು ಸ್ವಾಮಿಯವರ ಮೊದಲ ಪುಣ್ಯತಿಥಿ ಸಂದರ್ಭದಲ್ಲಿ ಮಂಡಿಸಲಾದ ನಿರ್ಣಯದಲ್ಲಿ ವರ್ಗಸ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News