ಉಡುಪಿ : 16ನೆ ಶತಮಾನದ ಜೈನ ಶಾಸನ ಪತ್ತೆ

Update: 2022-07-07 12:34 GMT

ಉಡುಪಿ : ಬೈಂದೂರು ತಾಲೂಕಿನ ಗೋಳಿಬೇರು ಪ್ರದೇಶದಲ್ಲಿ ೧೬ನೆ ಶತಮಾನದ ಜೈನರ ಶಾಸನವೊಂದನ್ನು ಪತ್ತೆ ಹಚ್ಚಲಾಗಿದೆ. ತುಂಡಾಗಿರುವ ಈ ಶಾಸನ ಸ್ಥಳೀಯ ಚೆನ್ನ ಪೂಜಾರಿ ಎಂಬವರ ಗದ್ದೆಯಲ್ಲಿದ್ದು, ಅವರನ್ನು ‘ಯಕ್ಷ’ ಎಂದು ಪೂಜಿಸಿ ಸಂರಕ್ಷಿಸಿಕೊಂಡು ಬಂದಿದ್ದರು.

ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ರಾದ ಪ್ರೊ. ಎಸ್.ಎ.ಕೃಷ್ಣಯ್ಯ ಹಾಗೂ ಯು. ಕಮಲಬಾಯಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಕೆ. ಶ್ರೀಧರ ಭಟ್ ನೇತೃತ್ವದಲ್ಲಿ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ವಸ್ತುಸಂಗ್ರಹಾಲಯದ ನಿರ್ದೇಶಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರು ಶಾಸನದ ಅಧ್ಯಯನ ಮಾಡಿದ್ದಾರೆ.

ಕಣ ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನ ೫ ಅಡಿ ಎತ್ತರ ಮತ್ತು ೧.೫ ಅಡಿ ಅಗಲವಿದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಶಾಸನದ ಮುಂಭಾಗದಲ್ಲಿ ೩೩ ಸಾಲು ಹಾಗೂ ಹಿಂಭಾಗದಲ್ಲಿ ೩೩ ಸಾಲು, ಒಟ್ಟು ೬೬ ಸಾಲುಗಳನ್ನು ಹೊಂದಿರುವ ಈ ಶಾಸನದ ಮೇಲ್ಭಾಗದಲ್ಲಿ ಮುಕ್ಕೊಡೆ ಮತ್ತು ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ.

‘ಜಿಯಾ ಶ್ರೀಮತ್ಪರಮ ಗಂಭೀರ ಸ್ಯಾದ್ವ ದಾಮೋಗ ಲಾಂಛನಂ ತ್ರೈಲೋಕ್ಯನಾಥಸ್ಯ ಸಾಸನಂ ಜಿನ ಸಾಸನಂ’ ಎಂಬ ಜಿನ ಶ್ಲೋಕದಿಂದ ಪ್ರಾರಂಭ ವಾಗುವ ಈ ಶಾಸನವು ಶಕವರುಷ ೧೪೫೨ನೆಯ ವಿಕೃತಿ ಸಂವತ್ಸರದ ದ್ವಿತೀಯ ವೈಶಾಖ ಶುದ್ಧ ಪಂಚಮಿ, ಅಂದರೆ ಕ್ರಿ.ಶ ೧೫೩೦ರ ಕಾಲಮಾನಕ್ಕೆ ಸೇರುತ್ತದೆ. ಈ ಕಾಲಮಾನವು ವಿಜಯನಗರ ತುಳುವ ದೊರೆ ಅಚ್ಯುತ್ತರಾಯನಿಗೆ ಸೇರಿದ್ದು, ಈ ಸಂದರ್ಭದಲ್ಲಿ ಹಾಡುವಳ್ಳಿ ಸಾಳುವ ಮನೆತನದ ಸಂಗೀರಾಯನ ಮಗ ಗುರುರಾಯನು ಒಡೆಯನು ಸಂಗೀತಪುರ (ಹಾಡುವಳ್ಳಿ) ರಾಜಧಾನಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಎಂದು ಶಾಸನದಿಂದ ತಿಳಿದುಬರುತ್ತದೆ.

ಈ ಕಾಲದಲ್ಲಿ ಶ್ರೀಅಕಲಂಕ ದೇವರುಗಳ ದಿವ್ಯ ಶ್ರೀಪಾದ ಪದಂಗಳಿಗೆ ಮನ್ಮಹ ಮಂಡಳೇಶ್ವರ ಗುರುರಾಜ್ಸರು ಮಾಡಿದ ದಾನದ ಬಗ್ಗೆ ಶಾಸನವು ಉಲ್ಲೇಖಿಸುತ್ತದೆ. ಈ ಸಂದರ್ಭದಲ್ಲಿ ದಾನವಾಗಿ ಬಿಟ್ಟ ಭೂಮಿಯ ಚತುಸ್ಸೀಮೆಯ ಗಡಿಗಳು, ೨೬೦ ಮುಡಿ ಭತ್ತದ ವೃತ್ತಿಯನ್ನು ದಾಖಲಿಸಲಾಗಿದೆ. ಈ ದಾನವನ್ನು ಅಕಲಂಕ ದೇವರಿಗೆ, ವಿಜಯಕೀರ್ತಿ ದೇವರಿಗೆ  ಶಿಷ್ಯ ಪರಂಪರೆಯು ನಡೆಸಿಕೊಂಡು ಬರಬೇಕೆಂದು ಸಹಿರಣ್ಯೋದಕ ದಾನವನ್ನು ಗುರುರಾಜ ಒಡೆಯರ ಕೈಯಲ್ಲಿ ಅಕಲಂಕ ದೇವರುಗಳು ಧಾರೆಯೆರೆಸಿ ಕೊಂಡರು. ಉಳಿದಂತೆ ಶಾಸನದಲ್ಲಿ ಗಂಗರನಾಡ ಸೀಮೆ, ಗೋಳಿಯ ಬರ ಎಂಬ ಉಲ್ಲೇಖಗಳಿದ್ದು, ಇದು ಪ್ರಸ್ತುತ ಕರೆಯಲ್ಪಡುವ ಗಂಗನಾಡು ಮತ್ತು ಗೋಳಿಬೇರು ಪ್ರದೇಶದ ಪ್ರಾಚೀನ ಹೆಸರುಗಳಾಗಿದೆ ಎಂದು ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವಿದೆ. ಶಾಸನದ ಪ್ರಾಥಮಿಕ ಮಾಹಿತಿಯನ್ನು ವಿಶ್ವನಾಥ ಪೂಜಾರಿ ಅವರು ನೀಡಿದ್ದು, ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಿಶನ್ ಕುಮಾರ್ ಮೂಡುಬೆಳ್ಳೆ, ರವಿ ಸಂತೋಷ್ ಆಳ್ವ ಮತ್ತು ಗೋಪಾಲ ಪೂಜಾರಿ ಸಹಕಾರ ನೀಡಿದ್ದರು ಎಂದು ಶ್ರುತೇಶ್ ಆಚಾರ್ಯ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News