ಉಡುಪಿ ಜಿಲ್ಲೆಯಲ್ಲಿ ಮಳೆ ಮುಂದುವರಿಕೆ; ಬೈಂದೂರಿನಲ್ಲಿ ಒಂದೇ ದಿನ 20 ಸೆ.ಮಿ. ಮಳೆ

Update: 2022-07-07 15:37 GMT

ಉಡುಪಿ: ದಿನದಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದರೂ, ಬೈಂದೂರು ಹೊರತು ಪಡಿಸಿ ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತಿದ್ದ ಕಾರಣ, ಗುರುವಾರ ಉಡುಪಿ ಜಿಲ್ಲೆಯಲ್ಲಿ  ಮಳೆಯಿಂದ ಉಂಟಾದ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೆಚ್ಚಿನೆಲ್ಲಾ ಕಡೆಗಳಲ್ಲಿ  ತಗ್ಗು ಪ್ರದೇಶಗಳ ನೀರು ಇಳಿದು ಹೋಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಉಡುಪಿ, ಬ್ರಹ್ಮಾವರ, ಕಾಪು, ಕುಂದಾಪುರ, ಹೆಬ್ರಿ ತಾಲೂಕುಗಳಲ್ಲಿ ಮಳೆ ನಿರಂತರವಾಗಿ ಸುರಿಯುತಿದ್ದರೂ, ಮಧ್ಯೆ ಮಧ್ಯೆ ವಿರಾಮ ಪಡೆಯುತಿದ್ದು, ಇದರಿಂದ ಎರಡು ದಿನಗಳಲ್ಲಿದ್ದ ನೆರೆಯ ಭೀತಿ ಇಂದು ತಗ್ಗಿದೆ. ಆದರೆ ಸಂಜೆಯ ಬಳಿಕ ಮಳೆ ಬಿರುಸು ಪಡೆಯುವ ಸೂಚನೆ ಕಂಡುಬಂದಿದ್ದು, ಎಲ್ಲಾ ಕಡೆಗಳಲ್ಲೂ ಯಾವುದೇ ಸನ್ನಿವೇಶ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿದ್ದೇವೆ ಎಂದು ಕಾರ್ಕಳ ಹಾಗೂ ಉಡುಪಿ ತಾಲೂಕಿನ ತಹಶೀಲ್ದಾರ್ ಆಗಿರುವ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.

ಹವಾಮಾನ ಇಲಾಖೆ ಇನ್ನೂ ಎರಡು ದಿನ ರೆಡ್ ಅಲರ್ಟ್ ಘೋಷಿಸಿ ರುವುದರಿಂದ ಮುಂದಿನ ಎರಡು ದಿನಗಳಲ್ಲೂ ವಿಶೇಷ ಎಚ್ಚರಿಕೆಯಿಂದ ಇರುವ ಸ್ಥಿತಿ ಇದೆ. ಕಾರ್ಕಳ ಮತ್ತು ಉಡುಪಿ ತಾಲೂಕುಗಳಲ್ಲಿ ಮಳೆಯಿಂದ ಇಂದು ಯಾವುದೇ ಸಮಸ್ಯೆ ವರದಿಯಾಗಿಲ್ಲ. ಉಡುಪಿಯಲ್ಲಿ ಆರು ಹಾಗೂ ಕಾರ್ಕಳದಲ್ಲಿ ಐದು ಮನೆಗಳಿಗೆ ಭಾಗಶ: ಹಾನಿಯಾದ ವರದಿಗಳು ಬಂದಿವೆ ಎಂದು ಕುರ್ಡೇಕರ್ ತಿಳಿಸಿದರು.

ಕಳೆದ ಎರಡು-ಮೂರು ದಿನಗಳಿಂದ ನೀರು ನಿಂತಿದ್ದ ಹೆಬ್ರಿ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ನೀರು ಹರಿದುಹೋಗಿದೆ. ಇದರಿಂದ ಅಲ್ಲಾಗಿರುವ ಬೆಳೆ ಹಾನಿಯ ವರದಿ ತಯಾರಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಟ ಹೋಬಳಿಯಲ್ಲಿ ನಿನ್ನೆ ಕಂಡುಬಂದ ನೆರೆಯ ಸ್ಥಿತಿ ಇಂದು ಇರಲಿಲ್ಲ ಎಂದೂ ವಿಎ ತಿಳಿಸಿದ್ದಾರೆ.

ಬೈಂದೂರಿನಲ್ಲಿ ೨೦ಸೆ.ಮೀ. ಮಳೆ: ಇಂದು ಬೆಳಗ್ಗೆ ೮:೩೦ಕ್ಕೆ ಮುಕ್ತಾಯ ಗೊಂಡಂತೆ ಹಿಂದಿನ ೨೪ ಗಂಟೆಗಳಲ್ಲಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ೨೦.೮ಸೆ.ಮೀ. ಮಳೆ ಸುರಿದ ದಾಖಲೆ ಕಂಡುಬಂದಿದೆ. ಅದೇ ರೀತಿ ಹೆಬ್ರಿಯಲ್ಲಿ ೧೫ ಸೆ.ಮಿ. ಹಾಗೂ ಕುಂದಾಪುರದಲ್ಲಿ ೧೪.೬ಸೆ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ ೧೨.೬ಸೆ.ಮೀ.ಮಳೆ ಸುರಿದಿದೆ.

೧೫ ಮನೆಗಳಿಗೆ ಹಾನಿ: ಕಳೆದ ೨೪ ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು ೧೫ ಮನೆಗಳಿಗೆ ಹಾನಿಯಾಗಿದ್ದು ಏಳು ಲಕ್ಷ ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ. ಬ್ರಹ್ಮಾವರ ತಾಲೂಕು ಕಕ್ಕುಂಜೆಯ ಶಾರದಾ ಎಂಬವರ ಮನೆಯ ಗೋಡೆ ಮಳೆಗೆ ಸಂಪೂರ್ಣ ಕುಸಿದಿದ್ದು ಮೂರು ಲಕ್ಷ ರೂ.ಗಳಷ್ಟು ನಷ್ಟವಾಗಿದೆ.

ಹಾವಂಜೆ ಗ್ರಾಮದ ವೆಂಕಪ್ಪ ಆಚಾರ್ಯರ ಮನೆ ಮೇಲೆ ಮರಬಿದ್ದು ೬೫ ಸಾವಿರ ರೂ., ನೀಲಾವರದ ಗೀತಾ ದೇವಾಡಿಗರ ಗೋಡೆ ಕುಸಿದು ೫೦ ಸಾವಿರ ರೂ., ೭೬ ಬಡಗುಬೆಟ್ಟು ಗ್ರಾಮದ ಮೈಮುನಿಸಾ ಎಂಬವರ ಮನೆ ಮೇಲೆ ಮರ ಬಿದ್ದು ೫೦ ಸಾವಿರ ರೂ., ಪೆರ್ಡೂರಿನ ಪದ್ದು ಮರಕಾಲ್ತಿ ಎಂಬವರ ಮನೆ ಮೇಲೆ ಮರಬಿದ್ದು ೩೦ ಸಾವಿರ ರೂ. ಹಾಗೂ ಮುಂಡ್ಕೂರು ಗ್ರಾಮದ ಶಿವರಾಮ ಬಂಗೇರರ ಮನೆ ಮೇಲೆ ಮರಬಿದ್ದು ೩೫ ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News