ಮುಹಮ್ಮದ್ ಝುಬೈರ್‌ ಗೆ ಜಾಮೀನು ನಿರಾಕರಣೆ: ಏಳು ದಿನ ಉತ್ತರಪ್ರದೇಶ ಪೊಲೀಸರ ಕಸ್ಟಡಿಗೆ

Update: 2022-07-08 07:24 GMT

ಹೊಸದಿಲ್ಲಿ,ಜು.7: ಪತ್ರಕರ್ತ ಹಾಗೂ ಆಲ್ಟ್ ನ್ಯೂಸ್ ನ ಸಹಸ್ಥಾಪಕ ಮುಹಮ್ಮದ್ ಝುಬೈರ್ ಅವರಿಗೆ ಗುರುವಾರ ಜಾಮೀನು ನಿರಾಕರಿಸಿದ ಉ.ಪ್ರದೇಶದ ಸೀತಾಪುರ ನ್ಯಾಯಾಲಯವು,ಮೂವರು ಹಿಂದುತ್ವವಾದಿ ಸಂತರನ್ನು ‘ದ್ವೇಷ ಪ್ರಚೋದಕರು ’ಎಂದು ಬಣ್ಣಿಸಿದ ಪ್ರಕರಣದಲ್ಲಿ ಅವರನ್ನು ಏಳು ದಿನಗಳ ಅವಧಿಗೆ ಉ.ಪ್ರದೇಶ ಪೊಲೀಸರ ಕಸ್ಟಡಿಗೆ ನೀಡಿದೆ.

ಪ್ರಾಸಂಗಿಕವಾಗಿ,ಕಳೆದ ಕೆಲವು ತಿಂಗಳುಗಳಲ್ಲಿ ಮುಸ್ಲಿಮರ ಕುರಿತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಈ ಮೂವರು ಹಿಂದುತ್ವವಾದಿಗಳಾದ ಯತಿ ನರಸಿಂಹಾನಂದ ಸರಸ್ವತಿ,ಬಜರಂಗ ಮುನಿ ಮತ್ತು ಆನಂದ ಸ್ವರೂಪ ಅವರ ವಿರುದ್ಧ ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿವೆ.
ಜು.4ರಂದು ಝುಬೈರ್ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿತ್ತು. ಗುರುವಾರ ಝುಬೈರ್ ತನ್ನ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು,ಅವರನ್ನು 12 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಸೀತಾಪುರ ಪೊಲೀಸರು ಕೋರಿಕೊಂಡಿದ್ದರು.
ಜು.8ರಿಂದ ಜು.14ರವರೆಗೆ ಝುಬೈರ್ರನ್ನು ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ನ್ಯಾ.ಅಭಿನವ ಶ್ರೀವಾಸ್ತವ ಅವರು ಉ.ಪ್ರ.ಪೊಲೀಸರಿಗೆ ಅನುಮತಿ ನೀಡಿದರು.
 2018ರಲ್ಲಿ ಪೋಸ್ಟ್ ಮಾಡಿದ್ದ ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದ ಆರೋಪದ ಪ್ರತ್ಯೇಕ ಪ್ರಕರಣದಲ್ಲಿ ಝುಬೈರ್ರನ್ನು ಈವರೆಗೆ ದಿಲ್ಲಿಯ ತಿಹಾರ ಜೈಲಿನಲ್ಲಿರಿಸಲಾಗಿತ್ತು. ಈಗ ಅವರನ್ನು ಸೀತಾಪುರಕ್ಕೆ ಸ್ಥಳಾಂತರಿಸಲಾಗುವುದು.
 ಈ ನಡುವೆ ಝುಬೈರ್ ತನ್ನ ಮೇಲೆ ಆರೋಪಿಸಿರುವ ಅಪರಾಧವನ್ನು ಪುನರಾವರ್ತಿಸಬಹುದು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣವನ್ನು ನೀಡಿ ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿತು.
‘ನ್ಯಾಯಾಲಯದ ಆದೇಶ ನಿರೀಕ್ಷಿತವೇ ಆಗಿತ್ತು. ನಾವು ಶೀಘ್ರ ಮೇಲಿನ ನ್ಯಾಯಾಲಯಕ್ಕೆ ಹೋಗುತ್ತೇವೆ ’ಎಂದು ಝುಬೈರ್ ಪರ ವಕೀಲ ಮುಕುಲ್ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News