​ನಿರಾಶ್ರಿತರ ರಕ್ಷಣೆಯಲ್ಲಿ ವೈಫಲ್ಯ: ಗ್ರೀಕ್ ಅಧಿಕಾರಿಗಳಿಗೆ ಇಸಿಎಚ್ಆರ್ ಖಂಡನೆ

Update: 2022-07-08 14:39 GMT

ಲಂಡನ್, ಜು.8: ಏಜಿಯನ್ ಸಮುದ್ರದಲ್ಲಿ 2014ರಲ್ಲಿ 11 ನಿರಾಶ್ರಿತರು ಮುಳುಗಿ ಮೃತಪಟ್ಟ ಪ್ರಕರಣವನ್ನು ಖಂಡಿಸಿರುವ ಮಾನವ ಹಕ್ಕುಗಳ ಯುರೋಪಿಯನ್ ನ್ಯಾಯಾಲಯ (ಇಸಿಎಚ್ಆರ್), ಗ್ರೀಕ್ ಅಧಿಕಾರಿಗಳು ಕಾನೂನುಬಾಹಿರವಾಗಿ ವರ್ತಿಸಿ ನಿರಾಶ್ರಿತರನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು ತರಾಟೆಗೆತ್ತಿಕೊಂಡಿದೆ. 

ಈ ಪ್ರಕರಣದಲ್ಲಿ ಸಾಹಸಿಕವಾಗಿ ಈಜಿ ದಡ ಸೇರಿದ್ದ 12 ಮಂದಿಯನ್ನು ಗ್ರೀಕ್ ಅಧಿಕಾರಿಗಳು ಅವಮಾನಕರವಾಗಿ ನಡೆಸಿಕೊಂಡಿದ್ದು ಅವರ ಬಟ್ಟೆಬಿಚ್ಚಿಸಿ ಶೋಧ ನಡೆಸಿದ್ದಾರೆ. ಅಲ್ಲದೆ, ದೋಣಿ ಮುಳುಗಲು ಕಾರಣವಾದ ಅಂಶಗಳ ಬಗ್ಗೆ ಪರಿಣಾಮಕಾರಿ ತನಿಖೆ ನಡೆಸಲು ವಿಫಲರಾಗಿದ್ದಾರೆ ಎಂದೂ ಈ ಐತಿಹಾಸಿಕ ತೀರ್ಪಿನಲ್ಲಿ ನ್ಯಾಯಾಲಯ ಉಲ್ಲೇಖಿಸಿದೆ. 

ಗ್ರೀಕ್ ಅಧಿಕಾರಿಗಳು ನಿರಾಶ್ರಿತರ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ 3 ಕೌಂಟ್ ಅಪರಾಧ ಎಸಗಿದ್ದಾರೆ. ಅವರನ್ನು ರಕ್ಷಿಸಲು ವಿಫಲವಾಗಿರುವುದು, ಬದುಕುಳಿದವರೊಂದಿಗೆ ಅವಮಾನಕರ ರೀತಿಯಲ್ಲಿ ವರ್ತಿಸಿರುವುದು ಮತ್ತು ಸೂಕ್ತ ತನಿಖೆ ನಡೆಸಲು ವಿಫಲವಾಗಿರುವ ಅಪರಾಧ ಇದಾಗಿದೆ ಎಂದು ನ್ಯಾಯಾಲಯದ ತೀರ್ಪು ಹೇಳಿದೆ. ಗ್ರೀಕ್ನ ಸಮುದ್ರವ್ಯಾಪ್ತಿಯಲ್ಲಿದ್ದ ದೋಣಿಯನ್ನು ಗ್ರೀಕ್ ಅಧಿಕಾರಿಗಳು ಟರ್ಕಿಯತ್ತ ಬಲಪ್ರಯೋಗಿಸಿ ಎಳೆದುಕೊಂಡು ಹೋಗಿದ್ದರಿಂದ ದೋಣಿ ಮುಳುಗಿದೆ ಎಂದು ಬದುಕುಳಿದಿದ್ದ 16 ಮಂದಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. 

ಇದನ್ನು ನಿರಾಕರಿಸಿದ್ದ ಗ್ರೀಕ್ ಅಧಿಕಾರಿಗಳು, ತಾವು ದೋಣಿಯನ್ನು ಗ್ರೀಕ್ನ ದ್ವೀಪ ಫರ್ಮಾಕೊನಿಸಿಯತ್ತ ಎಳೆದೊಯ್ಯುತ್ತಿದ್ದಾಗ ದೋಣಿಯಲ್ಲಿದ್ದವರು ಗಾಭರಿಯಿಂದ ಅತ್ತಿತ್ತ ಚಲಿಸಿದಾಗ ದೋಣಿ ಮುಳುಗಿದೆ ಎಂದು ಪ್ರತಿಪಾದಿಸಿದ್ದರು. ಆದರೆ, ದೋಣಿ ಮುಳುಗಿದ ಬಳಿಕ 13 ನಿಮಿಷದ ನಂತರ ರಕ್ಷಣಾ ತಂಡದ ಹೆಲಿಕಾಪ್ಟರ್ ಆಗಮಿಸಿದ್ದು ಈ ಗಮನಾರ್ಹ ವಿಳಂಬವನ್ನು ತಪ್ಪಿಸಬಹುದಿತ್ತು.

 ಹೆಚ್ಚುವರಿ ರಕ್ಷಣಾ ಸಿಬಂದಿಯನ್ನು ನಿಯೋಜಿಸುವಲ್ಲಿಯೂ ಸಾಕಷ್ಟು ವಿಳಂಬವಾಗಿದೆ. ಪ್ರಸ್ತುತ ಪ್ರಕರಣದಲ್ಲಿನ ನಿರ್ದಿಷ್ಟ ಲೋಪಗಳು ಮತ್ತು ವಿಳಂಬದ ಬಗ್ಗೆ ಸರಕಾರ ಯಾವುದೇ ವಿವರಣೆಯನ್ನು ನೀಡಿಲ್ಲ ಮತ್ತು ರಕ್ಷಣಾ ಕಾರ್ಯಾಚರಣೆಯ ಆಯೋಜನೆ ಮತ್ತು ನಡೆಸಿದ ವಿಧಾನಗಳ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಎಂದು ನ್ಯಾಯಾಲಯ ಹೇಳಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News