‘ಪದ್ಮ ವಿಭೂಷಣದಿಂದ ಪ್ರಧಾನಿ ಜೊತೆ ಗಂಗಾ ಆರತಿವರೆಗೆ’ ಭಾರತದೊಂದಿಗೆ ಶಿಂಜೊ ಅಬೆಯವರ ಸಂಬಂಧ
ಹೊಸದಿಲ್ಲಿ, ಜು.8: ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆಯವರ ಹತ್ಯೆಗೆ ತೀವ್ರ ಆಘಾತವನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು,ಅವರು ತನ್ನ ಆತ್ಮೀಯ ಸ್ನೇಹಿತರಾಗಿದ್ದರು ಎಂದು ಹೇಳಿದ್ದಾರೆ. ‘ಅಬೆ ಉನ್ನತ ಜಾಗತಿಕ ಮುತ್ಸದ್ದಿ,ಅಸಾಧಾರಣ ನಾಯಕ ಹಾಗೂ ಗಮನಾರ್ಹ ಆಡಳಿತಗಾರರಾಗಿದ್ದರು. ಜಪಾನ ಮತ್ತು ವಿಶ್ವವನ್ನು ಉತ್ತಮ ತಾಣವನ್ನಾಗಿಸಲು ಅವರು ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದರು ’ಎಂದು ಮೋದಿ ಟ್ವೀಟಿಸಿದ್ದಾರೆ.
ಮೋದಿ ಮತ್ತು ಅಬೆ ನಿಕಟ ಸಂಬಂಧವನ್ನು ಹೊಂದಿದ್ದರು. ಮೋದಿ ತನ್ನ ಅತ್ಯಂತ ವಿಶ್ವಾಸಾರ್ಹ ಸ್ನೇಹಿತ ಎಂದು ಅಬೆ ಅಧಿಕೃತವಾಗಿ ಬಣ್ಣಿಸಿದ್ದರು. ಉಭಯ ನಾಯಕರ ನಡುವಿನ ನಿಕಟ ಸಂಬಂಧವು ಭಾರತ-ಜಪಾನ ಸಂಬಂಧಗಳನ್ನು ವಿಶೇಷ ವ್ಯೆಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆಯನ್ನಾಗಿ ಬಲಗೊಳಿಸುವಲ್ಲಿ ನೆರವಾಗಿತ್ತು.
2015ರಲ್ಲಿ ಮೋದಿ ಗಂಗಾ ಆರತಿಯನ್ನು ತೋರಿಸಲು ಅಬೆಯವರನ್ನು ತನ್ನ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಕರೆದೊಯ್ದಿದ್ದರು. ಎರಡು ವರ್ಷಗಳ ಬಳಿಕ ಆಗ ಜಪಾನ ಪ್ರಧಾನಿಯಾಗಿದ್ದ ಅಬೆ ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಶಂಕುಸ್ಥಾಪನೆಗಾಗಿ ಅಹ್ಮದಾಬಾದ್ಗೆ ಭೇಟಿ ನೀಡಿದ್ದರು. ಇದಾದ ಒಂದು ವರ್ಷದ ಬಳಿಕ ಮೋದಿ ಭಾರತ-ಜಪಾನ ವಾರ್ಷಿಕ ಶೃಂಗಸಭೆಗಾಗಿ ಜಪಾನಿಗೆ ತೆರಳಿದ್ದಾಗ ಅವರಿಗೆ ಅಬೆ ತನ್ನ ಖಾಸಗಿ ರಜಾದಿನದ ನಿವಾಸದಲ್ಲಿ ಆತಿಥ್ಯವನ್ನು ನೀಡಿದ್ದರು.
ಜಪಾನಿನ ದೀರ್ಘಾವಧಿಯ ಪ್ರಧಾನಿಯಾಗಿ ಅಬೆ ಭಾರತದೊಂದಿಗೆ ವಿಶೇಷ ಸಂಬಂಧವನ್ನು ಹಂಚಿಕೊಂಡಿದ್ದರು. 2021ರಲ್ಲಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮವಿಭೂಷಣವನ್ನು ಪ್ರದಾನಿಸಲಾಗಿತ್ತು. ಅಬೆ ಯುಪಿಎ ಆಡಳಿತದ ಸಂದರ್ಭ 2014ರಲ್ಲಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಮುಖ್ಯ ಅತಿಥಿಯೂ ಆಗಿದ್ದರು.
ಆಸಕ್ತಿಯ ವಿಷಯವೆಂದರೆ ಅಬೆಯವರ ಅಜ್ಜ (ತಾಯಿಯ ತಂದೆ) ನೊಬುಸುಕೆ ಕಿಶಿ ಅವರೂ ಭಾರತದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. 2007ರಲ್ಲಿ ಭಾರತೀಯ ಸಂಸತ್ನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದ ಸಂದರ್ಭ ಅಬೆ,ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 1957ರಲ್ಲಿ ದಿಲ್ಲಿಯಲ್ಲಿ ಆಗ ಜಪಾನ್ ಪ್ರಧಾನಿಯಾಗಿದ್ದ ತನ್ನ ಅಜ್ಜ ಕಿಶಿ ಅವರ ಆತಿಥೇಯರಾಗಿದ್ದರು ಎಂದು ತಿಳಿಸಿದ್ದರು.
ತನ್ನ ಆರ್ಥಿಕ ಸುಧಾರಣೆಗಳು ಮತ್ತು ನೀತಿಗಳಿಂದಾಗಿ ಹೆಸರಾಗಿದ್ದ ಅಬೆಯವರ ಆರ್ಥಿಕ ನೀತಿಗಳು ಜಪಾನಿನ ಆರ್ಥಿಕತೆಯ ಬೆಳವಣಿಗೆಗೆ ನೆರವಾಗಿದ್ದವು ಮತ್ತು ಸುಧಾರಣೆಗಳಿಗಾಗಿ ಅವರ ಒತ್ತು ‘ಅಬೆನಾಮಿಕ್ಸ್’ಎಂದೇ ಜನಪ್ರಿಯಗೊಂಡಿತ್ತು.
ಆರ್ಥಿಕ ಪಾಲುದಾರಿಕೆಗಳು ಮತ್ತು ಮೂಲಸೌಕರ್ಯವಲ್ಲದೆ ಜಪಾನ ಮತ್ತು ಭಾರತದ ನಡುವೆ ಸಹಭಾಗಿತ್ವದ ಸಾಮಾನ್ಯ ಕ್ಷೇತ್ರಗಳು ನಾಗರಿಕ ಪರಮಾಣು ಶಕ್ತಿಯಿಂದ ಹಿಡಿದು ಇಂಡೋ ಪೆಸಿಫಿಕ್ ಸಾಗರದಲ್ಲಿ ಭದ್ರತಾ ಕಾಳಜಿಗಳವರೆಗೆ ಹರಡಿಕೊಂಡಿವೆ.