ಬಹುತಾರಾಗಣದ ʼಪೊನ್ನಿಯಿನ್ ಸೆಲ್ವನ್: ಭಾಗ-1ʼ ಟೀಸರ್‌ ಬಿಡುಗಡೆ; ಮಣಿರತ್ನಂ ಚಿತ್ರಕ್ಕೆ ಗರಿಗೆದರಿದ ನಿರೀಕ್ಷೆ

Update: 2022-07-08 17:31 GMT

ಚೆನ್ನೈ: ಹೆಸರಾಂತ ಚಿತ್ರನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ʼಪೊನ್ನಿಯಿನ್ ಸೆಲ್ವನ್: ಭಾಗ-1ʼ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ದೊಡ್ಡ ತಾರಾಬಣ ಇರುವ ಚಿತ್ರಕ್ಕಾಗಿ ಮಣಿರತ್ನಂ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ದಕ್ಷಿಣ ಚಿತ್ರರಂಗ ಮತ್ತು ಬಾಲಿವುಡ್‌ನ ದೊಡ್ಡ ತಾರಾಬಳಗವಿದೆ.

‌ ಒಂದು ನಿಮಿಷ ಮತ್ತು 20 ಸೆಕೆಂಡುಗಳ ಚಿತ್ರದ ಟೀಸರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಐತಿಹಾಸಿಕ ಕಥಾ ಹಂದರವುಳ್ಳ ಈ ಚಿತ್ರವು ಪ್ರಾಚೀನ ತಮಿಳು ರಾಜಮನೆತನ ಚೋಳರಾಜರ ಕುರಿತಾಗಿನ ಕತೆಯನ್ನು ಹೊಂದಿದೆ. ಚಿತ್ರದ ದೊಡ್ಡ ಕ್ಯಾನ್ವಾಸಿನ ಸಣ್ಣ ಪರಿಚಯ ಈ ಟೀಸರಿನಲ್ಲಿ ಈಗಾಗಲೇ ಚಿತ್ರತಂಡ ಮಾಡಿದೆ.

ಚಿತ್ರದಲ್ಲಿ ಕಾರ್ತಿ ವಂತಿಯಥೇವನ್ ಆಗಿ, ಐಶ್ವರ್ಯ ರೈ ಬಚ್ಚನ್ ಪಜುವೂರಿನ ರಾಣಿ ನಂದಿನಿಯಾಗಿ, ಮತ್ತು ತ್ರಿಶಾ ಕೃಷ್ಣನ್ ರಾಜಕುಮಾರಿ ಕುಂದವಿ ಆಗಿ ನಟಿಸಿದ್ದಾರೆ. ಚೋಳರ ಪಟ್ಟದ ರಾಜಕುಮಾರ ಆದಿತ್ಯ ಕರಿಕಾಳನ್‌ ನಾಗಿ ಚಿಯಾನ್‌ ವಿಕ್ರಮ್‌ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಮತ್ತೋರ್ವ ಖ್ಯಾತ ಯುವನಟ ಜಯಂ ರವಿ ಅವರು ಅರುಲ್ ಮೊಳಿ ವರ್ಮನ್‌ ಆಗಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಇವರೊಂದಿಗೆ ಶರತ್‌ಕುಮಾರ್, ಅಮಿತಾಬ್ ಬಚ್ಚನ್, ಜಯರಾಮ್‌, ಪ್ರಭು, ಶಾಡೋಸ್ ರವಿ, ರಘುಮಾನ್, ವಿಕ್ರಮ್ ಪ್ರಭು, ಪ್ರಕಾಶ್‌ ರಾಜ್‌, ಪಾರ್ತಿಬನ್‌, ಕಿಶೋರ್‌, ಲಾಲ್‌, ಬಾಬು ಆಂಟನಿ, ಐಶ್ವರ್ಯ ಲಕ್ಷ್ಮಿ, ರಹಮಾನ್ ಮೊದಲಾದವರೂ ಈ ಚಿತ್ರದ ತಾರಾಗಣದಲ್ಲಿದ್ದಾರೆ.

ಈ ಚಿತ್ರವನ್ನು ಮದ್ರಾಸ್ ಟಾಕೀಸ್ ನಿರ್ಮಿಸುತ್ತಿದ್ದು, ಲೈಕಾ ಪ್ರಸ್ತುತಪಡಿಸಲಿದೆ.   ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.  ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಅಂತಿಮ ಹಂತದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಚಿತ್ರವು ಕಲ್ಕಿಯವರ ಪ್ರಸಿದ್ಧ ಕಾದಂಬರಿ "ಪೊನ್ನಿಯಿನ್ ಸೆಲ್ವನ್" ಅನ್ನು ಆಧರಿಸಿದೆ. ಪೊನ್ನಿಯನ್ ಸೆಲ್ವನ್ ಸಿನಿಮಾ ಮಾಡಬೇಕೆಂಬುದು ತಮಿಳುನಾಡಿನಲ್ಲಿ ಎಂಜಿಆರ್ ಕಾಲದಿಂದಲೂ ಕನಸಾಗಿತ್ತು. ಮಣಿರತ್ನಂ ಈಗ ಇದನ್ನು ಸಾಧ್ಯವಾಗಿಸಿದ್ದಾರೆ. ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 30 ರಂದು ತಮಿಳು, ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ʼ

ತಮಿಳಿನಲ್ಲಿ ಸೂರ್ಯ, ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಮಲಯಾಳಂನಲ್ಲಿ ಮೋಹನ್ ಲಾಲ್, ತೆಲುಗಿನಲ್ಲಿ ಮಹೇಶ್ ಬಾಬು ಮತ್ತು ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಟೀಸರ್ ಬಿಡುಗಡೆ ಮಾಡಿದ್ದಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News