×
Ad

ಪಿಂಚಣಿ ಪಡೆಯದ ಮಾಜಿ ರಕ್ಷಣಾ ಸಿಬ್ಬಂದಿಯಿಂದ ಜಪಾನ್ ಮಾಜಿ ಪ್ರಧಾನಿ ಅಬೆ ಹತ್ಯೆ: ಅಗ್ನಿಪಥ್ ಯೋಜನೆ ಟೀಕಿಸಿದ ಟಿಎಂಸಿ

Update: 2022-07-09 13:44 IST

ಕೋಲ್ಕತಾ: ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವನ್ನು ಗುರಿಯಾಗಿಸಲು ತೃಣಮೂಲ ಕಾಂಗ್ರೆಸ್(ಟಿಎಂಸಿ)  ಜಪಾನ್‌ನ ಮಾಜಿ ಪ್ರಧಾನಿ ಶಿಂಝೊ ಅಬೆ ಅವರ ಹತ್ಯೆಯನ್ನು ಪಕ್ಷದ ಮುಖವಾಣಿ 'ಜಾಗೋ ಬಾಂಗ್ಲಾ'ದಲ್ಲಿ ಉಲ್ಲೇಖಿಸಿದೆ.

'ಶಿಂಝೊ ಅಬೆ ಹತ್ಯೆಯ ಹಿಂದೆ ಅಗ್ನಿಪಥ್ ದ ನೆರಳು' ಎಂಬ ಹೆಡ್ ಲೈನ್ ಬಳಸಿರುವ ಟಿಎಂಸಿ ಮುಖವಾಣಿ 'ಜಾಗೋ ಬಾಂಗ್ಲಾ' ಪಿಂಚಣಿ ಪಡೆಯದ ಜಪಾನಿನ ಮಾಜಿ ರಕ್ಷಣಾ ಸಿಬ್ಬಂದಿಯಿಂದ ಅಬೆ ಹತ್ಯೆಗೀಡಾಗಿದ್ದಾರೆ  ಎಂದು ತನ್ನ ಮುಖಪುಟದ ಸುದ್ದಿಯಲ್ಲಿ ಅಭಿಪ್ರಾಯಪಟ್ಟಿದೆ.

ಶುಕ್ರವಾರ ಪಶ್ಚಿಮ ಜಪಾನ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಅಬೆ ಅವರ ಕುತ್ತಿಗೆ ಹಾಗೂ  ಎದೆಗೆ ಯುವಕನೊಬ್ಬ ಗುಂಡು ಹಾರಿಸಿದ್ದ. ಘಟನೆ ನಡೆದ  ಐದೂವರೆ ಗಂಟೆಗಳ ನಂತರ ಅಬೆ ಮೃತಪಟ್ಟರು ಎಂದು ಘೋಷಿಸಲಾಯಿತು.

ಹಂತಕನನ್ನು 41 ವರ್ಷದ ಟೆಟ್ಸುಯಾ ಯಮಗಾಮಿ ಎಂದು ಗುರುತಿಸಲಾಗಿದ್ದು, ಆತನನ್ನು  ತಕ್ಷಣವೇ ಬಂಧಿಸಲಾಯಿತು. ಹಂತಕ ಜಪಾನಿನ ನೌಕಾಪಡೆ ಗಳಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಎಂಸಿ ಜಪಾನಿನ ಕಡಲ ಸ್ವರಕ್ಷಣಾ ಪಡೆಗಳನ್ನು ಅಗ್ನಿಪಥ್ ಯೋಜನೆಯೊಂದಿಗೆ ಹೋಲಿಸಿದೆ. ಮೋದಿ ಸರಕಾರವು ರಕ್ಷಣಾ ಪಡೆಗಳಲ್ಲಿ ಅಲ್ಪಾವಧಿಗೆ ಯುವಕರನ್ನು ನೇಮಿಸಿಕೊಳ್ಳಲು ಉದ್ದೇಶಿಸಿದೆ.  ನಾಲ್ಕು ವರ್ಷಗಳ ನಂತರ ಪಿಂಚಣಿ ಹಾಗೂ  ಇತರ ನಿವೃತ್ತಿ ಪ್ರಯೋಜನಗಳಿಲ್ಲದೆ ಅವರನ್ನು ಹೊರಗೆ ಕಳುಹಿಸುತ್ತದೆ ಎಂದು ಆರೋಪಿಸಿದೆ.

ಶುಕ್ರವಾರ ಕಾಂಗ್ರೆಸ್ ನಾಯಕ ಸುರೇಂದ್ರ ರಜಪೂತ್ ಅವರು ಜಪಾನ್ ಮಾಜಿ ಪ್ರಧಾನಿ ಅಬೆ ಮೇಲೆ ದಾಳಿ ಮಾಡಿದ್ದ  ಶೂಟರ್ ನ  ಉದ್ದೇಶ ಹಾಗೂ  ಅಗ್ನಿಪಥ್ ಯೋಜನೆ ನಡುವೆ ಇದೇ ರೀತಿಯ ಹೋಲಿಕೆ ಮಾಡಿದ್ದರು.

“ಶಿಂಝೊ  ಅಬೆಗೆ ಗುಂಡು ಹಾರಿಸಿದ್ದ ಯಮಗಾಮಿ ಜಪಾನ್‌ನ ಪಿಂಚಣಿ ಸೌಲಭ್ಯ  ಇಲ್ಲದ ಎಸ್‌ಡಿಎಫ್‌ ಸೇನೆಯಲ್ಲಿ ಕೆಲಸ ಮಾಡಿದ್ದ’’ ಎಂದು  ಸುರೇಂದ್ರ ರಜಪೂತ್ ಟ್ವೀಟಿಸಿದ್ದರು. 

 ಅಬೆ ಹತ್ಯೆಗೈದ ಹಂತಕ ಯಮಗಾಮಿ ಮೂರು ವರ್ಷಗಳ ಕಾಲ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿದ ನಂತರ ತನ್ನ ಕೆಲಸವನ್ನು ಕಳೆದುಕೊಂಡಿದ್ದ. ಆತ  ನಿರುದ್ಯೋಗಿಯಾಗಿದ್ದು, ಯಾವುದೇ ಪಿಂಚಣಿ ಸೌಲಭ್ಯ ಪಡೆದಿರಲಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News