ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಿಸಿದ ಟಾಟಾ ಮೋಟಾರ್ಸ್
ಹೊಸದಿಲ್ಲಿ,ಜು.9: ಪ್ರಮುಖ ವಾಹನ ತಯಾರಿಕೆ ಸಂಸ್ಥೆ ಟಾಟಾ ಮೋಟರ್ಸ್ ಹೆಚ್ಚುತ್ತಿರುವ ನಿರ್ಮಾಣ ವೆಚ್ಚದ ಪರಿಣಾಮಗಳನ್ನು ಭಾಗಶಃ ಸರಿದೂಗಿಸಲು ಶನಿವಾರ ತನ್ನ ಪ್ರಯಾಣಿಕ ವಾಹನಗಳ ಬೆಲೆಗಳನ್ನು ಹೆಚ್ಚಿಸಿದ್ದು,ತಕ್ಷಣದಿಂದಲೇ ಈ ಏರಿಕೆ ಜಾರಿಗೆ ಬಂದಿದೆ.
ಆವೃತ್ತಿ ಮತ್ತು ಮಾದರಿಯನ್ನು ಅವಲಂಬಿಸಿ ಪ್ರಯಾಣಿಕ ವಾಹನಗಳ ಶ್ರೇಣಿಯಾದ್ಯಂತ ಸರಾಸರಿ ಶೇ.0.55ರಷ್ಟು ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದು ಟಾಟಾ ಮೋಟರ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಹೆಚ್ಚಿನ ನಿರ್ಮಾಣ ವೆಚ್ಚವನ್ನು ಹೀರಿಕೊಳ್ಳಲು ಕಂಪೆನಿಯು ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಉಳಿಕೆ ವೆಚ್ಚವನ್ನು ಸರಿದೂಗಿಸಲು ಕನಿಷ್ಠ ಬೆಲೆ ಏರಿಕೆಯನ್ನು ಮಾಡಲಾಗಿದೆ ಎಂದು ಕಂಪನಿಯು ತಿಳಿಸಿದೆ.ಪಂಚ್,ನೆಕ್ಸಾನ್,ಹ್ಯಾರಿಯರ್ ಮತ್ತು ಸಫಾರಿ ಸೇರಿದಂತೆ ವಿವಿಧ ಮಾಡೆಲ್ಗಳ ಕಾರುಗಳನ್ನು ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.ಟಾಟಾ ಮೋಟರ್ಸ್ ಈಗಾಗಲೇ ಈ ತಿಂಗಳಲ್ಲಿ ತನ್ನ ವಾಣಿಜ್ಯ ವಾಹನಗಳ ಬೆಲೆಗಳನ್ನು ಶೇ.1.5ರಿಂದ ಶೇ.2.5ರವರೆಗೆ ಹೆಚ್ಚಿಸಿದೆ.