ಸುಪ್ರೀಂ ಜಾಮೀನು ನೀಡಿದ ಬೆನ್ನಲ್ಲೇ ಮುಹಮ್ಮದ್ ಝುಬೈರ್ ವಿರುದ್ಧ ಲಖೀಂಪುರ್ ಖೇರಿ ಪೊಲೀಸರಿಂದ ವಾರಂಟ್

Update: 2022-07-09 16:11 GMT

ಲಕ್ನೋ,ಜು.9: ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶದ ಸೀತಾಪುರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೈರ್ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಐದು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ರಾಜ್ಯದ ಲಖಿಂಪುರ ಖೇರಿ ಪೊಲೀಸರು ಅವರ ವಿರುದ್ಧ ನ್ಯಾಯಾಲಯದಿಂದ ವಾರಂಟ್ ಪಡೆದುಕೊಂಡಿದ್ದಾರೆ. ಈ ವಾರಂಟ್ ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದಲ್ಲಿ ಝುಬೈರ್ ವಿರುದ್ಧ ಕಳೆದ ವರ್ಷ ಮುಹಮ್ಮದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದೆ.

ಜು.11ರಂದು ತನ್ನ ಮುಂದೆ ಹಾಜರಾಗುವಂತೆ ಲಖಿಂಪುರ ಖೇರಿ ನ್ಯಾಯಾಲಯವು ಝುಬೈರ್ಗೆ ಆದೇಶಿಸಿದೆ.
ನ್ಯಾಯಾಲಯದ ನಿರ್ದೇಶದ ಮೇರೆಗೆ ಕಳೆದ ವರ್ಷದ ಸೆಪ್ಟಂಬರ್ನಲ್ಲಿ ಲಖಿಂಪುರ ಖೇರಿ ಪ್ರಕರಣವು ದಾಖಲಾಗಿತ್ತು. ಶುಕ್ರವಾರ ಸ್ಥಳೀಯ ನ್ಯಾಯಾಲಯದಿಂದ ಝುಬೈರ್ ವಿರುದ್ಧ ವಾರಂಟ್ ಪಡೆದುಕೊಂಡ ಲಖಿಂಪುರ ಪೊಲೀಸರು ಅದನ್ನು ಸೀತಾಪುರ ಜೈಲಿನಲ್ಲಿರುವ ಅವರಿಗೆ ಜಾರಿಗೊಳಿಸಿದ್ದಾರೆ.

ಜು.11ರಂದು ತನ್ನೆದುರು ಹಾಜರಾಗುವಂತೆ ಲಖಿಂಪುರ ಖೇರಿ ನ್ಯಾಯಾಲಯವು ಝುಬೈರ್ಗೆ ಆದೇಶಿಸಿದ್ದು,ಅವರನ್ನ ಹಾಜರು ಪಡಿಸುವುದು ಜೈಲು ಅಧಿಕಾರಿಗಳ ಹೊಣೆಗಾರಿಕೆಯಾಗಿದೆ ಎಂದು ಎಸ್ಪಿ ಸಂಜೀವ ಸುಮನ್ ತಿಳಿಸಿದರು. ಝುಬೈರ್ ಕೋಮು ಸೌಹಾರ್ದವನ್ನು ಕದಡಲು ಟ್ವಿಟರ್ನಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿ ಆಶಿಷ್ ಕುಮಾರ್ ಕಟಿಯಾರ್ ಎಂಬಾತ ಪ್ರಕರಣವನ್ನು ದಾಖಲಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.ಪ್ರತ್ಯೇಕ ಪ್ರಕರಣದಲ್ಲಿ ದಿಲ್ಲಿಯ ಜೈಲಿನಲ್ಲಿದ್ದ ಝುಬೈರ್ರನ್ನು ಎರಡು ದಿನಗಳ ಹಿಂದೆ ಸೀತಾಪುರಕ್ಕೆ ತರಲಾಗಿತ್ತು. ದಿಲ್ಲಿ ಪೊಲೀಸರು ಝುಬೈರ್ರನ್ನು ಸೀತಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು,ಅದು ಅವರಿಗೆ ಆರು ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News