ಆಂಬುಲೆನ್ಸ್ ಸಿಗದೆ ತಮ್ಮನ ಶವ ಮಡಿಲಲ್ಲಿಟ್ಟುಕೊಂಡು ಬೀದಿ ಬದಿ ಕೂತ 8 ವರ್ಷದ ದಲಿತ ಬಾಲಕ

Update: 2022-07-11 16:20 GMT
ಶವ ಮಡಿಲಲ್ಲಿಟ್ಟುಕೊಂಡು ಕುಳಿತಿರುವ ಬಾಲಕ

ಭೋಪಾಲ,ಜು.11: ತನ್ನ ತಂದೆ ಆ್ಯಂಬುಲನ್ಸ್ಗಾಗಿ ಪರದಾಡುತ್ತಿದ್ದರೆ ಎಂಟರ ಹರೆಯದ ಬಾಲಕ ತನ್ನ ಎರಡು ವರ್ಷದ ತಮ್ಮನ ಶವವನ್ನು ತೊಡೆಯ ಮೇಲಿಟ್ಟುಕೊಂಡು ಮೊರೆನಾ ಜಿಲ್ಲಾಸ್ಪತ್ರೆಯ ಹೊರಗೆ ಎರಡು ಗಂಟೆಗಳ ಕಾಲ ಕಾಯುತ್ತ ಕುಳಿತಿದ್ದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರವಿವಾರ ನಡೆದ ಈ ಘಟನೆಯ ಬಗ್ಗೆ ತನಿಖೆಗೆ ಮಧ್ಯಪ್ರದೇಶ ಸರಕಾರವು ಆದೇಶಿಸಿದೆ.

 ಮೊರೆನಾ ಜಿಲ್ಲೆಯ ಬದ್ಫಾರಾ ಗ್ರಾಮದ ನಿವಾಸಿ ಪೂಜಾರಾಮ ಜಾತವ್ ರಕ್ತಹೀನತೆ ಮತ್ತು ಇತರ ಕಾಯಿಲೆಗಳಿಂದ ನರಳುತ್ತಿದ್ದ ತನ್ನ ಎರಡು ವರ್ಷದ ಪುತ್ರ ರಾಜಾನನ್ನು ಅಂಬಾ ಪಟ್ಟಣದಲ್ಲಿಯ ಆಸ್ಪತ್ರೆಗೆ ದಾಖಲಿಸಿದ್ದ. ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ ಮಗುವನ್ನು ರವಿವಾರ ಬೆಳಿಗ್ಗೆ ಆ್ಯಂಬುಲೆನ್ಸ್ನಲ್ಲಿ ಮೊರೆನಾ ಜಿಲ್ಲಾಸ್ಪತ್ರೆಗೆ ತಂದಿದ್ದ. ಬಳಿಕ ಆ್ಯಂಬುಲೆನ್ಸ್ ಅಂಬಾಕ್ಕೆ ವಾಪಸಾಗಿತ್ತು. ಮೊರೆನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಮಗು ಮೃತಪಟ್ಟಿತ್ತು. ಶವವನ್ನು ಸ್ವಗ್ರಾಮಕ್ಕೆ ಸಾಗಿಸಲು ಆ್ಯಂಬುಲೆನ್ಸ್ಗಾಗಿ ಆಸ್ಪತ್ರೆಯ ಅಧಿಕಾರಿಗಳನ್ನು ಜಾತವ್ ಕೋರಿದ್ದನಾದರೂ ಆ ವೇಳೆಗೆ ಆ್ಯಂಬುಲೆನ್ಸ್ ಲಭ್ಯವಿರಲಿಲ್ಲ ಎಂದು ವೈದ್ಯಾಧಿಕಾರಿ ಸುರೇಂದರ್ ಗುರ್ಜರ್ ತಿಳಿಸಿದರು.

ಜಾತವ್ ತನ್ನ ಹಿರಿಯ ಪುತ್ರ ಎಂಟರ ಹರೆಯದ ಗುಲ್ಶನ್ಗೆ ಶವವನ್ನು ಒಪ್ಪಿಸಿ ಆ್ಯಂಬುಲೆನ್ಸ್ ಹುಡುಕಲು ಹೊರಗೆ ತೆರಳಿದ್ದ. ಬಾಲಕ ಶವವನ್ನು ತೊಡೆಯಲ್ಲಿಟ್ಟುಕೊಂಡು ಆಸ್ಪತ್ರೆಯ ಆವರಣ ಗೋಡೆಯ ಬಳಿ ಕುಳಿತಿದ್ದ. ಕಣ್ಣಿರು ಸುರಿಸುತ್ತಲೇ ಸತ್ತ ತಮ್ಮನ ಶವವನ್ನು ಆಗಾಗ್ಗೆ ಮುದ್ದಿಸುತ್ತ,ಶವಕ್ಕೆ ಮುತ್ತುತ್ತಿದ್ದ ನೊಣಗಳನ್ನು ಓಡಿಸುತ್ತಿದ್ದ. ಪತ್ರಕರ್ತರೋರ್ವರು ಈ ದೃಶ್ಯದ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಕೊನೆಗೂ ಪೊಲೀಸ್ ವಾಹನವೊಂದು ಶವವನ್ನು ಜಾತವ್ನ ಮನೆಗೆ ಸಾಗಿಸಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News