×
Ad

ಭಾರತವು ಈಗ 164ನೇ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ: ಮೋದಿ ಸರ್ಕಾರಕ್ಕೆ ಮತ್ತೆ ಕುಟುಕಿದ ಸುಬ್ರಮಣಿಯನ್‌ ಸ್ವಾಮಿ

Update: 2022-07-11 23:04 IST

ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಟೀಕಿಸುತ್ತಾ ಬಂದಿರುವ  ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಮಂಗಳವಾರ ಕೇಂದ್ರದ ವಿರುದ್ಧ ಮತ್ತೊಮ್ಮೆ ಟೀಕೆ ಮಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭಾರತ ಬೆಳೆಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಹಿಂದೆ ಬಿದ್ದಿದೆ ಎಂಬ ಚಿತ್ರವನ್ನು ಸ್ವಾಮಿ ಟ್ವೀಟ್‌ ಮಾಡಿದ್ದಾರೆ. 

”ವಿಶ್ವದ 193 ದೇಶಗಳಲ್ಲಿ ಭಾರತವು ಈಗ 164 ನೇ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. 2011 ರಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದ್ದ (ದೇಶವು) 2021 ರಲ್ಲಿ 164ನೇ ಸ್ಥಾನಕ್ಕೆ ತಲುಪಿದೆ” ಎಂದು ಹೇಳುವ ಚಿತ್ರವನ್ನು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದಿರುವ, ಮಾಜಿ ಕೇಂದ್ರ ಸಚಿವರೂ ಆದ  ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿದ್ದಾರೆ. 

ಈ ಪ್ರತಿಪಾದನೆಯನ್ನು ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಮೇಲಿನ ತಪ್ಪು ಮಾಹಿತಿಯನ್ನು ಸತ್ಯಶೋಧನೆ ಮಾಡುವ PIB ಪರಿಶೀಲನೆಯು ನಿರಾಕರಿಸಿದ್ದು, ʼಇದು ನಕಲಿಯಾಗಿದೆ. ಪಿಪಿಪಿ ವಿಷಯದಲ್ಲಿ ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗಿದೆʼ ಎಂದು ಹೇಳಿದೆ. 
 
 ಇದೇ ಆಧಾರದಲ್ಲಿ ನೆಟ್ಟಿಗರೊಬ್ಬರು ಸುಬ್ರಮಣಿಯನ್‌ ಸ್ವಾಮಿಗೆ ಪ್ರತಿಕ್ರಿಯಿಸಿದ್ದು, ಪಿಪಿಪಿ ವಿಷಯದಲ್ಲಿ ಭಾರತದ ಆರ್ಥಿಕತೆಯು ಇನ್ನೂ 3 ನೇ ಅತಿದೊಡ್ಡ ಸ್ಥಾನದಲ್ಲಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, “GDP ಯ PPP ಮೌಲ್ಯಮಾಪನದಲ್ಲಿ 3ನೇ ಅತಿ ದೊಡ್ಡದು. ಆದರೆ ತಲಾ ಆದಾಯದಲ್ಲಿ 164ನೇ ಸ್ಥಾನದಲ್ಲಿದೆ. ಕುತರ್ಕ ಮಾಡುವ ಮೊದಲು ಪರಿಕಲ್ಪನೆಗಳನ್ನು ತಿಳಿದುಕೊಳ್ಳಿ.” ಎಂದು ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News