×
Ad

ರಜೆ ನಿರಾಕರಿಸಿದ ಮೇಲಧಿಕಾರಿಗಳು: ಸಿಟ್ಟಿನಿಂದ ಸಿಆರ್ಪಿಎಫ್ ಯೋಧ ಆತ್ಮಹತ್ಯೆ

Update: 2022-07-11 23:46 IST

ಜೋಧಪುರ,ಜು.11: ಮೇಲಧಿಕಾರಿಗಳು ರಜೆ ನಿರಾಕರಿಸಿದ ಕಾರಣಕ್ಕೆ ಸಿಟ್ಟಾಗಿದ್ದ ಸಿಆರ್ಪಿಎಫ್ ಯೋಧ ತನ್ನ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಪಲಡಿ ಖಿಂಚಿಯಾನ್ನಲ್ಲಿರುವ ಸಿಆರ್ಪಿಎಫ್ ತರಬೇತಿ ಕೇಂದ್ರದಲ್ಲಿ ಸೋಮವಾರ ಸಂಭವಿಸಿದೆ.

ನರೇಶ ಜಾಟ್ ರವಿವಾರ ರಜೆಯನ್ನು ಬಯಸಿದ್ದರು,ಆದರೆ ಸಿಆರ್ಪಿಎಫ್ ಡಿಐಜಿ ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಜಾಟ್ ಸಹೋದ್ಯೋಗಿಯೋರ್ವನ ಕೈಯನ್ನು ಕಚ್ಚಿದ್ದರು ಮತ್ತು ಇದಕ್ಕಾಗಿ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಇದರಿಂದ ಇನ್ನಷ್ಟು ಸಿಟ್ಟಾಗಿದ್ದ ಜಾಟ್ ನೇರವಾಗಿ ನಾಲ್ಕನೇ ಅಂತಸ್ತಿನಲ್ಲಿಯ ತನ್ನ ವಸತಿ ಗೃಹಕ್ಕೆ ತೆರಳಿ ಪತ್ನಿ ಮತ್ತು ಪುತ್ರಿಯೊಂದಿಗೆ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದರು.
ಸಂಜೆ 5:30ರ ಸುಮಾರಿಗೆ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದ ಜಾಟ್ ತನ್ನ ಸೇವಾ ರೈಫಲ್‌ನಿಂದ ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದರು ಮತ್ತು ತನ್ನ ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದರು.

ಆತ್ಮಹತ್ಯೆಯ ಕ್ರಮಕ್ಕೆ ಮುಂದಾಗದಂತೆ ಜಾಟ್ ಮನವೊಲಿಸಲು ಪೊಲೀಸರು ಮತ್ತು ಸಿಆರ್ಪಿಎಫ್ ಅಧಿಕಾರಿಗಳು ರಾತ್ರಿಯಿಡೀ ಪ್ರಯತ್ನಿಸಿದ್ದರು. ಮಗನೊಂದಿಗೆ ಮಾತನಾಡಲು ತಂದೆಯನ್ನೂ ಕರೆಸಿದ್ದರು. ಸಿಆರ್‌ಪಿಎಫ್‌ನ ಐಜಿ ಜೊತೆಗೆ ಜಾಟವ್ಗೆ ಸಂಪರ್ಕವನ್ನೂ ಕಲ್ಪಿಸಲಾಗಿದ್ದು,ಅವರು ಸ್ಥಳಕ್ಕೆ ಹೊರಟಿದ್ದರು. ಆದರೆ ಅವರು ಬರುವ ಮೊದಲೇ ಸೋಮವಾರ ಪೂರ್ವಾಹ್ನ 11:30ರ ಸುಮಾರಿಗೆ ಜಾಟ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಿಸಿಪಿ ಅಮೃತಾ ದುಹನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News