ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಗೆ ಶಿವಸೇನೆ ಬೆಂಬಲ: ಉದ್ಧವ್ ಠಾಕ್ರೆ

Update: 2022-07-12 17:48 GMT

ಮುಂಬೈ, ಜು. 12:  ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮ ಅವರಿಗೆ ತನ್ನ ನೇತೃತ್ವದ ಶಿವಸೇನೆ ಬೆಂಬಲ ನೀಡಲಿದೆ ಎಂದು ಉದ್ಧವ್ ಠಾಕ್ರೆ ಮಂಗಳವಾರ ಘೋಷಿಸಿದ್ದಾರೆ. 

ದ್ರೌಪದಿ ಮುರ್ಮು ಮಹಿಳೆ ಹಾಗೂ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರನ್ನು ಬೆಂಬಲಿಸುವಂತೆ ಪಕ್ಷದ 22 ಸಂಸದರಲ್ಲಿ 16 ಸಂಸದರು ಉದ್ಧವ್ ಠಾಕ್ರೆ ಅವರನ್ನು ಆಗ್ರಹಿಸಿದ ಬಳಿಕ ಈ ನಿರ್ಧಾರ ಹೊರಬಿದ್ದಿದೆ.

ಮೇಲ್ನೋಟಕ್ಕೆ ಉದ್ಧವ್ ಠಾಕ್ರೆ ಅವರು ಒತ್ತಡಕ್ಕೆ ಮಣಿದು ಈ ನಿರ್ಧಾರ ತೆಗೆದುಕೊಂಡಿರುವಂತೆ ಕಾಣುತ್ತದೆ. ಯಾಕೆಂದರೆ, ಕಳೆದ ತಿಂಗಳು ಹಲವು ಶಾಸಕರು  ಏಕನಾಥ ಶಿಂದೆ ನೇತೃತ್ವದಲ್ಲಿ ಬಂಡಾಯ ಎದ್ದಿದ್ದರು. ಅಲ್ಲದೆ, ಬಿಜೆಪಿ ಬೆಂಬಲದಲ್ಲಿ ಸರಕಾರ ರಚಿಸಿದ್ದರು. ಆದುದರಿಂದ ಉದ್ಧವ್ ಠಾಕ್ರೆ ಅವರ ನೇತೃತ್ವದ ಶಿವಸೇನೆ ಮುರ್ಮು ಅವರಿಗೆ ಬೆಂಬಲ ನೀಡಲು ಅವರ ಬುಡಕಟ್ಟು ಹಿನ್ನೆಲೆಯ ಕಾರಣ ನೀಡಿದೆ.  

‘‘ಇದು ರಾಷ್ಟ್ರಪತಿಯಾಗಲು ಬುಡಕಟ್ಟು ಮಹಿಳೆಗೆ ದೊರೆಯುತ್ತಿರುವ ಮೊದಲ ಅವಕಾಶ ಎಂದು ತನ್ನ ಪಕ್ಷದ ಬುಡುಕಟ್ಟು ನಾಯಕರು ತಿಳಿಸಿದರು. ಶಿವಸೇನೆಯ ಸಂಸದರ ಸಭೆಯಲ್ಲಿ ಯಾರೊಬ್ಬರೂ ನನ್ನ ಮೇಲೆ ಒತ್ತಡ ಹೇರಿಲ್ಲ’’ ಎಂದು ಅವರು ಹೇಳಿದ್ದಾರೆ. 
‘‘ವಾಸ್ತವವಾಗಿ, ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ನಾನು ಅವರಿಗೆ ಬೆಂಬಲ ನೀಡಬಾರದು. ಆದರೆ, ನಾವು ಸಂಕುಚಿತ ಮನಸ್ಥಿತಿಯವರಲ್ಲ’’ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News