24 ದಿನಗಳಲ್ಲಿ 9ನೇ ಘಟನೆ: ಸ್ಪೈಸ್ ಜೆಟ್ ನ ದುಬೈ-ಮದುರೈ ವಿಮಾನಯಾನ ವಿಳಂಬ

Update: 2022-07-12 18:18 GMT

ಹೊಸದಿಲ್ಲಿ,ಜು.12: ವಿಮಾನದ ನೋಸ್ ವ್ಹೀಲ್ ನಲ್ಲಿ ತಾಂತ್ರಿಕ ದೋಷದಿಂದಾಗಿ ಸೋಮವಾರ ಸ್ಪೈಸ್ ಜೆಟ್ ನ ದುಬೈ-ಮದುರೈ ಯಾನವು ವಿಳಂಬಗೊಂಡಿತ್ತು ಎಂದು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಐ)ದ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಇದು ಕಳೆದ 24 ದಿನಗಳಲ್ಲಿ ಸ್ಪೈಸ್ ಜೆಟ್ ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕನಿಷ್ಠ ಒಂಭತ್ತನೇ ಘಟನೆಯಾಗಿದೆ. ಈ ಹಿನ್ನೆಲೆಯಲ್ಲಿ ಜು.6ರಂದು ಡಿಜಿಸಿಎ ಸ್ಪೈಸ್ ಜೆಟ್ ಗೆ ಶೋ-ಕಾಸ್ ನೋಟಿಸ್ ಹೊರಡಿಸಿತ್ತು.
 
ಸೋಮವಾರ ಮಂಗಳೂರು-ದುಬೈ ಯಾನವನ್ನು ಪೂರ್ಣಗೊಳಿಸಿದ್ದ ಬೋಯಿಂಗ್ ಬಿ737 ಮ್ಯಾಕ್ಸ್ ವಿಮಾನವು ಬಳಿಕ ಮದುರೈಗೆ ಮರಳಬೇಕಿತ್ತು. ಆದರೆ ವಿಮಾನದ ನೋಸ್ ವ್ಹೀಲ್ ನಲ್ಲಿ ದೋಷವಿರುವುದನ್ನು ಇಂಜಿನಿಯರ್ ಓರ್ವರು ಪತ್ತೆ ಹಚ್ಚಿದ್ದರು. ಬಳಿಕ ಸ್ಪೈಸ್ ಜೆಟ್ ಮತ್ತೊಂದು ವಿಮಾನವನ್ನು ಮುಂಬೈನಿಂದ ದುಬೈಗೆ ರವಾನಿಸಿತ್ತು.

ಯಾವುದೇ ವಿಮಾನಯಾನ ಸಂಸ್ಥೆಯಲ್ಲಿ ವಿಳಂಬಗಳು ಸಂಭವಿಸುತ್ತವೆ. ಈ ಯಾನದಲ್ಲಿ ಯಾವುದೇ ಸುರಕ್ಷತಾ ಭೀತಿಯಿರಲಿಲ್ಲ ಎಂದು ಸ್ಪೈಸ್ ಜೆಟ್ ನ ವಕ್ತಾರರೋರ್ವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News