ಪ್ರವಾಹದಲ್ಲಿ ಕೊಚ್ಚಿಹೋದ ಕಾರಿನಲ್ಲಿದ್ದ ಮೂವರು ನೀರುಪಾಲು

Update: 2022-07-13 02:33 GMT

ನಾಗ್ಪುರ: ಸೇತುವೆ ದಾಟುತ್ತಿದ್ದ ಕಾರೊಂದು ಪ್ರವಾಹದ ನೀರಿನಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಲಾವೃತ ಕಾರಿನ ಕಿಟಕಿಯಿಂದ ಕೈ ಹೊರಹಾಕಿ ಕಾರಿನ ಮೇಲ್ಭಾಗವನ್ನು ಹಿಡಿದಿರುವುದು ಕಾಣಿಸುತ್ತಿದೆ. ನೂರಾರು ಮಂದಿ ನದಿದಂಡೆಯಲ್ಲಿ ನಿಂತು ಈ ದೃಶ್ಯವನ್ನು ನೋಡುತ್ತಿದ್ದು, ಮೊಬೈಲ್‍ನಲ್ಲಿ ಘಟನೆಯನ್ನು ಚಿತ್ರೀಕರಿಸುವಲ್ಲಿ ಅಥವಾ ಫೋಟೊ ಕ್ಲಿಕ್ಕಿಸುವಲ್ಲಿ ನಿರತರಾಗಿರುವುದು ಕಂಡುಬರುತ್ತಿದೆ.

ನಾಗ್ಪುರದ ಸವನೇರ್ ತಹಸೀಲ್‍ನಲ್ಲಿ ಈ ಘಟನೆ ನಡೆದಿದ್ದು, ಭಾರಿ ಮಳೆಯ ನಡುವೆ ಸೇತುವೆ ದಾಟುವ ವೇಳೆ ಕಾರಿನ ಜತೆಗೆ ಕಾರಿನಲ್ಲಿದ್ದ ಮೂವರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಎರಡೂ ಬದಿಗೆ ರೇಲಿಂಗ್ಸ್ ಇಲ್ಲದ ಸೇತುವೆಯನ್ನು ಎಂಟು ಜನರಿದ್ದ ಎಸ್‍ಯುವಿ ದಾಟುತ್ತಿತ್ತು. ಸೇತುವೆಯ ಮೇಲೆ ಹರಿಯುತ್ತಿದ್ದ ನೀರು ಕಾರನ್ನೂ ಕೊಚ್ಚಿಕೊಂಡು ಹೋದಾಗ ಇಬ್ಬರು ಸುರಕ್ಷಿತವಾಗಿ ಈಜಿ ಪಾರಾಗಿದ್ದಾರೆ. ಮೂವರ ಮೃತದೇಹ ಪತ್ತೆಯಾಗಿದ್ದು, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ನತದೃಷ್ಟ ಕಾರಿನಲ್ಲಿದ್ದವರು ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ. ನಾಪತ್ತೆಯಾದ ಮೂವರಿಗೆ ಶೋಧ ಕಾರ್ಯ ನಡೆದಿದೆ.

"ಕಾರಿನಲ್ಲಿದ್ದ ಪ್ರಯಾಣಿಕರು ಮಧ್ಯಪ್ರದೇಶದ ಮುಲ್ತಾಯಿಯವರು. ವಿವಾಹ ಸಮಾರಂಭಕ್ಕಾಗಿ ನಾಗ್ಪುರಕ್ಕೆ ಆಗಮಿಸಿದ್ದರು. ಮನೆಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಜುಲೈ 1 ರಿಂದ 10ರವರೆಗೆ ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿ ದುರಂತಗಳಿಂದ ಕನಿಷ್ಠ 83 ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News