ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ರನ್ನು ಟ್ರಾನ್ಸ್ ಫರ್ ವಾರಂಟ್ ಪಡೆದು ಬಂಧಿಸಿದ ಗುಜರಾತ್ ಎಸ್ಐಟಿ

Update: 2022-07-13 06:01 GMT
 ಸಂಜೀವ್ ಭಟ್ (PTI)

ಅಹ್ಮದಾಬಾದ್: ಗುಜರಾತ್ ಪೊಲೀಸರ ವಿಶೇಷ ತನಿಖಾ ತಂಡವು ಟ್ರಾನ್ಸ್ ಫರ್ ವಾರಂಟ್ ಮೂಲಕ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಬಂಧಿಸಿದೆ. ಗುಜರಾತ್‍ನಲ್ಲಿ 2002 ಹಿಂಸಾಚಾರ ಸಂಬಂಧಿತ ಪ್ರಕರಣದಲ್ಲಿ ನಿರಪರಾಧಿಗಳ ಮೇಲೆ ತಪ್ಪಾಗಿ ಆರೋಪ ಹೊರಿಸಲು ಸಂಚು ಹೂಡಿದ ಪ್ರಕರಣ ಇದಾಗಿದೆ.

ಪ್ರಕರಣದಲ್ಲಿ ಭಟ್ ಅವರು ಮೂರನೇ ಆರೋಪಿಯಾಗಿದ್ದಾರೆ. ಈಗಾಗಲೇ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹಾಗೂ ಮಾಜಿ ಗುಜರಾತ್ ಡಿಜಿಪಿ ಆರ್ ಬಿ ಶ್ರೀಕುಮಾರ್ ಅವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

ಭಟ್ ಅವರನ್ನು 2018ರಿಂದ ಬಾನಸ್ಕಂತ  ಜಿಲ್ಲೆಯ ಪಾಲನ್ಪುರ್ ಜೈಲಿನಲ್ಲಿರಿಸಲಾಗಿದೆ. ರಾಜಸ್ಥಾನ ಮೂಲದ ವಕೀಲರೊಬ್ಬರನ್ನು ಸಿಕ್ಕಿಸಿ ಹಾಕಲು ಡ್ರಗ್ಸ್ ಇರಿಸಿದ ಆರೋಪದ 27 ವರ್ಷ ಹಳೆಯ ಪ್ರಕರಣದಲ್ಲಿ ಅವರು ಜೈಲಿನಲ್ಲಿದ್ದಾರೆ. ಜಾಮ್ನಗರದಲ್ಲಿ ನಡೆದ ಕಸ್ಟಡಿ ಸಾವು ಪ್ರಕರಣದಲ್ಲೂ ಅವರು ದೋಷಿಯೆಂದು ನ್ಯಾಯಾಲಯ ಈಗಾಗಲೇ ಘೋಷಿಸಿದೆ.

"ಸಂಜೀವ್ ಭಟ್ ಅವರನ್ನು ಪಾಲನ್ಪುರ್ ಜೈಲಿನಿಂದ ಟ್ರಾನ್ಸ್ ಫರ್ ವಾರಂಟ್ ಮೇಲೆ ಕಸ್ಟಡಿಗೆ ಪಡೆದುಕೊಂಡು ಮಂಗಳವಾರ ಸಂಜೆ ಔಪಚಾರಿಕವಾಗಿ ಅವರನ್ನು ಬಂಧಿಸಿದ್ದೇವೆ,'' ಎಂದು ಅಹ್ಮದಾಬಾದ್ ಕ್ರೈಂ ಬ್ರಾಂಚ್ ಡಿಸಿಪಿ ಚೈತನ್ಯ ಮಂಡಲೀಕ್ ಹೇಳಿದ್ದಾರೆ.

ಗುಜರಾತ್ ನಲ್ಲಿ 2002ರಲ್ಲಿ ನಡೆದ ಹಿಂಸಾಚಾರದ ವಿವಿಧ ಪ್ರಕರಣಗಳಲ್ಲಿ ಸುಳ್ಳು ಸಾಕ್ಷ್ಯಗಳ ಪ್ರಕರಣದಲ್ಲಿ ಭಟ್, ತೀಸ್ತಾ ಮತ್ತು ಶ್ರೀಕುಮಾರ್ ಅವರ ಪಾತ್ರಗಳ ಕುರಿತು ತನಿಖೆ ನಡೆಸಲು ಗುಜರಾತ್ ಸರಕಾರ ಕಳೆದ ತಿಂಗಳು ರಚಿಸಿದ ಎಸ್ಐಟಿನ ಒಬ್ಬ ಸದಸ್ಯರಾಗಿ ಮಂಡಲೀಕ್ ಸೇವೆ ಸಲ್ಲಿಸುತ್ತಿದ್ದಾರೆ.

2002 ಹಿಂಸಾಚಾರ ಪ್ರಕರಣಗಳಲ್ಲಿ ಆಗಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರಿಗೆ ಎಸ್ಐಟಿ ನೀಡಿದ ಕ್ಲೀನ್ ಚಿಟ್ ಅನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಎತ್ತಿ ಹಿಡಿದ ನಂತರ ತೀಸ್ತಾ ಮತ್ತು ಶ್ರೀಕುಮಾರ್ ಅವರ ಬಂಧನವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News