ಮಣಿಪಾಲ: ರೆಸ್ಟೋರೆಂಟ್ ಬೆಂಕಿಗಾಹುತಿ; ಅಪಾರ ನಷ್ಟ

Update: 2022-07-15 15:57 GMT

ಮಣಿಪಾಲ : ಮಣಿಪಾಲ ಎಂಐಟಿ ಸಮೀಪದಲ್ಲಿರುವ ವಸತಿಗೃಹದ  ಫ್ಯಾಮಿಲಿ ರೆಸ್ಟೋರೆಂಟ್ ಒಂದರಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು  ರೆಸ್ಟೋರೆಂಟ್ ಒಂದು ಸುಟ್ಟು ಕರಕಲಾದ ಘಟನೆ  ಸಂಭವಿಸಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಇಲ್ಲಿನ ಖಾಸಗಿ ಲಾಡ್ಜ್‌ನ ಭದ್ರತಾ ಸಿಬ್ಬಂದಿ ಮುಂಜಾನೆ ಐದು ಗಂಟೆ ಸುಮಾರಿಗೆ ರೆಸ್ಟೋರೆಂಟ್‌ನಲ್ಲಿ ಬೆಂಕಿ ಯನ್ನು ಗಮನಿಸಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬೇಕೆಂದು ಹೇಳಲಾಗಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಅಗ್ನಿಶಾಮಕ ದಳ ಎರಡು ವಾಹನಗಳ ಮೂಲಕ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರೂ, ಕೆಲವೇ ಹೊತ್ತಿನಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ  ಫ್ಯಾಮಿಲಿ ರೆಸ್ಟೋರೆಂಟ್‌ನ್ನು ವ್ಯಾಪಿಸಿತು. ಎಂಟು ಮಂದಿ ಸಿಬ್ಬಂದಿಗಳು ಸತತ ಒಂದು ಗಂಟೆ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ರೆಸ್ಟೋರೆಂಟ್ ಒಳಗಿದ್ದ ಪೀಠೋಪಕರಣ, ಗ್ರೋಸರಿ, ಇಂಟಿರೀಯರ್, ಮದ್ಯದ ಬಾಟಲಿಗಳು ಸಾಕಷ್ಟು ಬೆಂಕಿಗಾಹುತಿಯಾಗಿವೆ. ಇದರಿಂದ ಅಂದಾಜು ೧೦ರಿಂದ ೧೫ ಲಕ್ಷ ರೂ.ವರೆಗೆ ನಷ್ಟ ಸಂಭವಿಸಿರಬಹುದು ಎಂದು ಅಗ್ನಿಶಾಮಕ ದಳ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News