ಫ್ಯಾಕ್ಟ್‌ಚೆಕ್ ಪ್ರಕರಣದಲ್ಲಿ ಮುಹಮ್ಮದ್ ಝುಬೈರ್ ಜಾಮೀನು ಅರ್ಜಿ ತಿರಸ್ಕರಿಸಿದ ಉತ್ತರಪ್ರದೇಶ ಕೋರ್ಟ್

Update: 2022-07-16 14:14 GMT

ಲಖನೌ: 2021ರ ಟ್ವೀಟ್ ನಲ್ಲಿ ಸತ್ಯ ಪರಿಶೀಲನೆ (ಫ್ಯಾಕ್ಟ್‌ ಚೆಕ್) ಪ್ರಕರಣದಲ್ಲಿ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರ ಜಾಮೀನು ಅರ್ಜಿಯನ್ನು ಲಖಿಂಪುರ ಖೇರಿಯ ಸೆಷನ್ಸ್ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ. ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ತನ್ನ ಟ್ವೀಟ್ ಮೂಲಕ ಸ್ಥಳೀಯ ಚಾನೆಲ್ ಅನ್ನು ದೂಷಿಸಿದ ಕಾರಣಕ್ಕಾಗಿ ಮೊಹಮ್ಮದಿ ಪೊಲೀಸ್ ಠಾಣೆಯಲ್ಲಿ ಪತ್ರಕರ್ತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಸೋಮವಾರ ಲಖಿಂಪುರ ಖೇರಿ ನ್ಯಾಯಾಲಯವು ಝುಬೈರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.

ಐಪಿಸಿ ಸೆಕ್ಷನ್ 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಟಿವಿ ಪತ್ರಕರ್ತ ಆಶಿಶ್ ಕುಮಾರ್ ಕಟಿಯಾರ್ ಅವರು ನೀಡಿದ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 18, 2021 ರ ಪ್ರಕರಣದಲ್ಲಿ ಜುಬೈರ್ ವಿರುದ್ಧ ವಾರಂಟ್ ಹೊರಡಿಸಲಾಗಿದೆ.

ಜುಲೈ 13 ರಂದು ಪ್ರಕರಣದ ಜಾಮೀನು ವಿಚಾರಣೆಯನ್ನು ಫಿರ್ಯಾದಿದಾರರು ತಮಗೆ ಒದಗಿಸಿದ ಅರ್ಜಿಯ ಹಿಂದಿ ಅನುವಾದವನ್ನು ಕೇಳಿದ್ದರಿಂದ ಶನಿವಾರಕ್ಕೆ ಮುಂದೂಡಲಾಯಿತು. ಶುಕ್ರವಾರ, ದಿಲ್ಲಿ ನ್ಯಾಯಾಲಯವು ಆಕ್ಷೇಪಾರ್ಹ ಟ್ವೀಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿತ್ತು, "ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಭಿನ್ನಾಭಿಪ್ರಾಯದ ಧ್ವನಿ ಅಗತ್ಯ" ಎಂದು ಹೇಳಿಕೆ ನೀಡಿತ್ತು.

ಈ ಮಧ್ಯೆ, ಮತ್ತೊಂದು ಬೆಳವಣಿಗೆಯಲ್ಲಿ, ಹತ್ರಾಸ್ ಪೊಲೀಸರು ಝುಬೈರ್‌ನನ್ನು ರಿಮಾಂಡ್ ಮಾಡುವಂತೆ ಕೋರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News