ಅಚ್ಛೇದಿನ್ ಪದವನ್ನು ನಿಷೇಧಿಸಲಾಗಿದೆ....!

Update: 2022-07-17 04:19 GMT

 
ಸರಕಾರ ಸಂಸತ್‌ನಲ್ಲಿ ಕೆಲವು ಪದಗಳನ್ನು ನಿಷೇಧಿಸಿದೆ ಎನ್ನುವುದು ಗೊತ್ತಾದದ್ದೇ ಪತ್ರಕರ್ತ ಎಂಜಲು ಕಾಸಿ ಗಾಬರಿಗೊಂಡ. ಹೀಗೆ ಪದಗಳನ್ನೇ ನಿಷೇಧ ಮಾಡಿದರೆ, ಸಂಸತ್ ಅಧಿವೇಶನವನ್ನು ವರ್ಣರಂಜಿತವಾಗಿ ವರದಿ ಮಾಡುವುದಾದರೂ ಹೇಗೆ? ಭ್ರಷ್ಟಾಚಾರ, ಜುಮ್ಲಾಬಾಜಿ ಮೊದಲಾದ ಪದಗಳಿಲ್ಲದೆ ಇದ್ದರೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು ಕೈಸನ್ನೆಯಿಂದ ಮಾತನಾಡುತ್ತಾರೆಯೆ?ಎಲ್ಲಕ್ಕಿಂತ ಮುಖ್ಯವಾಗಿ ಸರಕಾರವನ್ನು ಟೀಕಿಸಲು ಬಳಸುವ ಎಲ್ಲ ಪದಗಳನ್ನು ನಿಷೇಧಿಸಿರುವುದರಿಂದ, ವಿರೋಧ ಪಕ್ಷಗಳು ಸದನದಲ್ಲಿ ಸರಕಾರವನ್ನು ಯಾವ ಭಾಷೆಯಲ್ಲಿ ಟೀಕಿಸಬೇಕು? ಮೊದಲಾದವುಗಳ ಕುರಿತಂತೆ ತಲೆ ಕೆಡಿಸಿಕೊಂಡು ಕುಳಿತಿರಲಾಗಿ, ಪ್ರಧಾನ ಸಂಪಾದಕರು ಕಾಸಿಯ ಕೈಗೆ ಅದೇನೋ ಕಿರು ಹೊತ್ತಗೆಯನ್ನು ತಂದಿಟ್ಟರು. ‘‘ಏನಿದು ಸಾರ್?’’ ಕಾಸಿ ಕೇಳಿದ.
‘‘ಕೇಂದ್ರ ಸರಕಾರ ಪ್ರಕಟಿಸಿರುವ ಪುಸ್ತಕ ಇದು. ಪತ್ರಿಕೆಗಳಲ್ಲಿ ಬಳಸಬಾರದ ಪದಗಳನ್ನು ಪಟ್ಟಿ ಮಾಡಿದ್ದಾರೆ. ಇನ್ನು ಮುಂದೆ ನಿಮ್ಮ ವರದಿಗಳಲ್ಲಿ ಈ ಪದಗಳು ಇರಬಾರದು. ಇದ್ದರೆ ನಿಮ್ಮ ಗುರುತು ಪತ್ರವನ್ನು ಕಿತ್ತು ಕೊಳ್ಳಲಾಗುತ್ತದೆಯಂತೆ....’’ ಎಂದವರೇ ಹೊರಟು ಬಿಟ್ಟರು.
ಕಾಸಿ ಆತಂಕದಿಂದ ಪುಸ್ತಕವನ್ನು ಬಿಡಿಸಿದ. ಮೊದಲ ಪುಟದಲ್ಲೇ ‘ಕುಸಿತ’ ಎನ್ನುವ ಪದವನ್ನು ನೋಡಿದ. ಕಾಸಿಗೆ ಕೂಡಲೇ ತಲೆಗೆ ಹೊಳೆಯಿತು. ‘‘ಡಾಲರ್ ಮುಂದೆ ರೂಪಾಯಿ ಬೆಲೆ ಕುಸಿತ’ ಎಂದು ಇನ್ನು ಮುಂದೆ ಬರೆಯುವಂತಿಲ್ಲ. ಹಾಗಾದರೆ ಇನ್ನು ಮುಂದೆ ರೂಪಾಯಿ ಬೆಲೆ ಕುಸಿದರೆ ಏನು ಮಾಡುವುದು?
ನೇರವಾಗಿ ಸಂಪಾದಕರ ಬಳಿ ಧಾವಿಸಿ ತನ್ನ ಅಳಲನ್ನು ಮುಂದಿಟ್ಟ ‘‘ಸಾರ್...ಇನ್ನು ಮುಂದೆ ‘ಡಾಲರ್ ಮುಂದೆ ರೂಪಾಯಿ ಬೆಲೆ ಕುಸಿತ’’ ಎನ್ನುವುದನ್ನು ಬರೆಯುವುದು ಹೇಗೆ?’’
ಸಂಪಾದಕರು ತಲೆ ಕೆರೆದುಕೊಂಡು ‘‘ಸ್ವಲ್ಪ ಪಾಸಿಟಿವ್ ಆಗಿ ಬರೆಯಿರಿ. ರುಪಾಯಿ ಮುಂದೆ ಡಾಲರ್ ಬೆಲೆ ಜಿಗಿತ ಎಂದು ಯಾಕೆ ಬರೆಯಬಾರದು?’’ ಎಂದು ಸಲಹೆ ನೀಡಿದರು. ಕಾಸಿಗೂ ಸರಿಯೆನಿಸಿತು. ಸರಿ, ಇನ್ನು ಮುಂದೆ ರೂಪಾಯಿ ಕುಸಿತವನ್ನು ಡಾಲರ್ ಜಿಗಿತ ಎಂದು ಬರೆದರೆ ರೂಪಾಯಿಯ ಮಾನವೂ, ಮೋದಿಯವರ ಬೆಲೆಯೂ ಉಳಿಯಿತು. ಎರಡನೇ ಪುಟದಲ್ಲಿ ಮೊದಲ ಸಾಲಲ್ಲಿ ‘‘ಬರ್ಬರ ಅತ್ಯಾಚಾರ’’ ಎನ್ನುವ ಪದವನ್ನು ನಿಷೇಧಿಸಲಾಗಿತ್ತು. ಪ್ರತಿದಿನ ನಡೆಯುವ ಅತ್ಯಾಚಾರಗಳನ್ನು ಇನ್ನು ಪತ್ರಿಕೆಗಳಲ್ಲಿ ಹೇಗೆ ಬರೆಯುವುದು.....?
ಸಂಪಾದಕರು ಸಲಹೆ ನೀಡಿದರು ‘‘ನೋಡಿ...ಬಲವಂತವಾಗಿ ಲೈಂಗಿಕ ಕ್ರಿಯೆ’’ ಎಂದು ಬರೆಯಿರಿ.
‘‘ಆದರೆ ಬರ್ಬರವಾಗಿದ್ದರೆ....’’ ಕಾಸಿ ಸಮಾಧಾನವಾಗದೆ ಕೇಳಿದ.
‘‘ಬರ್ಬರವಾಗಿದ್ದರೆ ಬಲವಂತಕ್ಕೆ ಒಂದು ಅಡಿ ಒತ್ತು ಹಾಕಿ...ಬಲವಂತ್ತ ಎಂದು ಬರೆಯಿರಿ...ಮತ್ತೇನು ಮಾಡುವುದು?’’ ಸಂಪಾದಕರು ಉಪಾಯ ಹೇಳಿದರು.
‘‘ಸಾರ್...‘ಬಡತನ’ ಪದವನ್ನು ನಿಷೇಧಿಸಿದ್ದಾರೆ ಸಾರ್. ಅದರ ಜೊತೆಗೆ ಹಸಿವು ಪದವೂ ಬಳಸಬಾರದಂತೆ...’’ ಕಾಸಿ ಈಗ ಕಂಗಾಲಾಗಿದ್ದ. ‘‘ಇನ್ನು ಮುಂದೆ ದೇಶದ ಬಡವರ ಬಗ್ಗೆ ಹೇಗೆ ಬರೆಯುವುದು ಸಾರ್?’’
‘‘ನೋಡ್ರೀ...ಅಂಬಾನಿ ಆಸ್ತಿಯಲ್ಲಿ ಹೆಚ್ಚಳ. ಅದಾನಿ ನಂ. 1 ಎಂದು ಬರೆಯಿರಿ. ಜನರಿಗೆ ದೇಶದಲ್ಲಿ ಬಡತನ ಹೆಚ್ಚಿರುವುದು ಸಹಜವಾಗಿಯೇ ಅರ್ಥವಾಗುತ್ತದೆ. ದೇಶದಲ್ಲಿ ಬಡವರು ಹೆಚ್ಚಾದರೆ ಮಾತ್ರ ತಾನೆ ಅಂಬಾನಿ ಆಸ್ತಿ ಹೆಚ್ಚಾಗಲು ಸಾಧ್ಯ? ಬಡತನ ತೀವ್ರವಾದರೆ ‘ಅಂಬಾನಿ ಆಸ್ತಿಯಲ್ಲಿ ತೀವ್ರ ಹೆಚ್ಚಳ ಎಂದು ಬರೆಯಿರಿ...’’ ಸಂಪಾದಕರು ಕಿರುನಗುತ್ತಾ ಕಾಸಿಯ ಸಂಕಟವನ್ನು ನಿವಾರಿಸಿದರು.
‘‘ಸಾರ್....ಹಸಿವು....’’ ಕಾಸಿ ಮತ್ತೆ ತಗಾದೆ ತೆಗೆದ.
‘‘ದೇಶದಲ್ಲಿ ‘ಮಲಬದ್ಧತೆ’ಯಲ್ಲಿ ಹೆಚ್ಚಳ ಎಂದು ಬರೆಯೋಣ.... ತಿಂದರೆ ತಾನೆ ಮಲವಿಸರ್ಜನೆ ಸಾಧ್ಯ.....’’ ಅದಕ್ಕೂ ಪರಿಹಾರ ಸಿಕ್ಕಿತು.
‘‘ಬೆಲೆಯೇರಿಕೆ ಪದಕ್ಕೂ ನಿಷೇಧ ಸಾರ್....’’ ಕಾಸಿ ಇನ್ನೊಂದು ಪದವನ್ನು ಕೈಗೆತ್ತಿಕೊಂಡ.
 
‘‘ಎಲ್ಲವೂ ಬೆಲೆ ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ಬೆಲೆಯೇರಿಕೆ ಎಂದು ಬರೆಯುವುದು ಅಷ್ಟು ಚೆನ್ನಾಗಿರುವುದಿಲ್ಲ. ಅದಕ್ಕೆ ಆ ಪದವನ್ನು ನಿಷೇಧಿಸಿರಬೇಕು. ಇನ್ನು ಮುಂದೆ ಬೆಲೆಯೇರಿದಂತೆಯೇ ಅವುಗಳಿಗೆ ‘ಮಹತ್ವ ಪಡೆದುಕೊಂಡ ಟೊಮೆಟೋ....’ ‘ಪೆಟ್ರೋಲ್ ಬಳಕೆಯಲ್ಲಿ ಹೆಚ್ಚಳ’ ಎಂಬಿತ್ಯಾದಿಯಾಗಿ ಬರೆಯೋಣ....’’ ಸಂಪಾದಕರು ಬೆಲೆಗೂ ಒಂದು ಪರಿಹಾರ ಸೂಚಿಸಿದರು. ‘‘ಪರ್ಸೆಂಟೇಜ್ ಪದವನ್ನು ಪತ್ರಿಕೆಗಳಲ್ಲಿ ಬಳಸಬಾರದಂತೆ ಸಾರ್...’’ ಕಾಸಿ ಮತ್ತೆ ತಕರಾರು ತೆಗೆದ.
‘‘ಅದಕ್ಕೆ ಬದಲು ‘ಗೌರವ ಧನ’ ಎಂದು ಬಳಸಿದರೆ ಆಯಿತು....ಸಚಿವರು ಇಂತಹ ಕಾಮಗಾರಿಗಾಗಿ ಇಷ್ಟು ಗೌರವ ಧನವನ್ನು ಗುತ್ತಿಗೆದಾರರಿಂದ ಪಡೆದರು... ಎಂದು ಬರೆಯೋಣ....’’
‘‘ನೋಟು ನಿಷೇಧ....’’ ಕಾಸಿ ಬಾಯಿ ತೆಗೆದ.
‘‘ಎಲ್ಲವೂ ನಿಷೇಧಿಸಲ್ಪಟ್ಟಿರುವಾಗ ನೋಟುಗಳನ್ನು ನಿಷೇಧಿಸುವುದರಲ್ಲಿ ಏನಿದೆ? ಡಿಜಿಟಲ್ ಇಂಡಿಯಾ ಎಂದು ಬರೆದರೆ ಜನರಿಗೆ ಅರ್ಥವಾಗಿ ಬಿಡುತ್ತದೆ...’’
‘‘ಸಾರ್...ಅಚ್ಛೇದಿನ್...ಪದಕ್ಕೂ ನಿಷೇಧ ಹೇರಲಾಗಿದೆ....’’ ಕಾಸಿ ಹೇಳಿದ.

‘‘ದೇಶದಲ್ಲಿ ಮತ್ತೆ ಬುರೇದಿನ್ ಆಗಮನ. ಜನರ ಸಂಭ್ರಮ.... ಎಂದು ಬರೆದರಾಯಿತು...’’ ಸಂಪಾದಕರು ಸಂಭ್ರಮಿಸಿ ಹೇಳಿದರು. ಕಾಸಿಯೂ ಅವರ ಜೊತೆಗೆ ಸಂಭ್ರಮಿಸಿ ಹೊಸ ಪದಗಳ ಜೊತೆಗೆ ಹೊಸ ಪತ್ರಿಕೋದ್ಯಮವನ್ನು ಆರಂಭಿಸಲು ಮುಂದಾದ. 

Writer - ಚೇಳಯ್ಯ chelayya@gmail.com

contributor

Editor - ಚೇಳಯ್ಯ chelayya@gmail.com

contributor

Similar News