ಅಂಗಡಿಗಳು ‘ಬೀಫ್’ ಸೈನ್ ಬೋರ್ಡ್‌ ತೆರವುಗೊಳಿಸಬೇಕೆಂಬ ಆದೇಶ ಹಿಂಪಡೆದ ಅರುಣಾಚಲ ಪ್ರದೇಶ

Update: 2022-07-17 18:17 GMT

ಗುವಾಹಟಿ, ಜು. 17: ಇಟಾನಗರ ರಾಜಧಾನಿ ಪ್ರದೇಶ ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ‘ಗೋಮಾಂಸ’ ಎಂದು ಪ್ರದರ್ಶಿಸುವ ಸೈನ್ ಬೋರ್ಡ್‌ಗಳನ್ನು ಸೋಮವಾರದ ಒಳಗೆ ತೆಗೆದು ಹಾಕಬೇಕು,  ಇಲ್ಲದಿದ್ದರೆ  2 ಸಾವಿರ ರೂ. ದಂಡ ವಿಧಿಸಲಾಗುವುದು ಹಾಗೂ ವ್ಯಾಪಾರ ಪರವಾನಿಗೆ  ರದ್ದುಗೊಳಿಸಲಾಗುವುದು ಎಂದು ಸೂಚಿಸಿದ ಆದೇಶವನ್ನು ಮುಂದಿನ ನೋಟಿಸು ಬರುವವರೆಗೆ ತಡೆ ಹಿಡಿಯಲಾಗಿದೆ ಎಂದು ಅರುಣಾಚಲಪ್ರದೇಶದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. 

ಅರುಣಾಚಲ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಎಸಿಸಿಐ) ಸೇರಿದಂತೆ ಹಲವು ಸಂಘಟನೆಗಳು ಹಾಗೂ ವ್ಯಕ್ತಿಗಳಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಬಳಿಕ ಇಟಾನಗರ ರಾಜಧಾನಿ ಪ್ರದೇಶದ ಉಸ್ತುವಾರಿ ಹೊಂದಿರುವ ನಾಹರ್ಲಗುನ್  ಜಿಲ್ಲಾಧಿಕಾರಿ ಈ ಅಧಿಸೂಚನೆ ಹೊರಡಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. 

‘‘ಅನುಸರಣೆಗೆ ಸಮಯ ಮಿತಿ ವಿಸ್ತರಿಸುವಂತೆ ಕೋರಿ ಹಲವು ಮನವಿಗಳನ್ನು  ಸ್ವೀಕರಿಸಲಾಗಿದೆ. ಆದೇಶದ ಕುರಿತು ಹಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ತಮ್ಮ ವಿಭಿನ್ನ ಅಭಿಪ್ರಾಯ ಹಾಗೂ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಪರಿಶೀಲಿಸಿ ಮುಂದಿನ ಆದೇಶದ ವರೆಗೆ ಜುಲೈ 13ರ ಆದೇಶವನ್ನು ತಡೆ ಹಿಡಿಯಲಾಗಿದೆ’’ ಎಂದು ಅವರು  ಹೇಳಿದ್ದಾರೆ.   

ನಾಹರ್ಲಗುನ್‌ನ ಜಿಲ್ಲಾಧಿಕಾರಿ ಗೋಮಾಂಸ ಸೈನ್ ಬೋರ್ಡ್ ನಿಷೇಧ ಆದೇಶ ನೀಡಿದ ಕೂಡಲೇ ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅಲ್ಲದೆ ಹಲವು ವ್ಯಕ್ತಿಗಳು ಹಾಗೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.      

ನಾಹರ್ಲಗುನ್‌ನ  ಜಿಲ್ಲಾಧಿಕಾರಿ ಟಾಮೊ ಡಾಡಾ ಅವರು ಜುಲೈ 13ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಇಟಾನಗರ್ ರಾಜಧಾನಿ ಪ್ರದೇಶಕ್ಕೆ ಭಾರತದ ಸಂವಿಧಾನದ ಜಾತ್ಯತೀತತೆ ಬಗ್ಗೆ  ನಂಬಿಕೆ ಇದೆ.   ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ‘ಗೋಮಾಂಸ’ ಎಂಬ ಸೈನ್ ಬೋರ್ಡ್ ಅನ್ನು ಪ್ರದರ್ಶಿಸುವುದರಿಂದ ಸಮುದಾಯದ ಕೆಲವು ವರ್ಗಗಳ ಭಾವನೆಗಳಿಗೆ ಧಕ್ಕೆ ಉಂಟಾಗಬಹುದು. ಆದರಿಂದ ಎರಡು ಗುಂಪುಗಳ 
ನಡುವೆ ವೈರತ್ವ ಸೃಷ್ಟಿಯಾಗಬಹುದು ಎಂದು ಹೇಳಿತ್ತು.    
ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಅರುಣಾಚಲಪ್ರದೇಶ ಘಟಕ ಅಶಾಂತಿ ಹುಟ್ಟು ಹಾಕುವ ಉದ್ದೇಶದಿಂದ ಈ ಆದೇಶ ನೀಡಲಾಗಿದೆ ಎಂದಿತ್ತು.   

ಜಿಲ್ಲಾಡಳಿತ ಈ ಆದೇಶವನ್ನು  ಹಿಂಪಡೆಯುವಂತೆ ರಾಜ್ಯ ಯುವ ಕಾಂಗ್ರೆಸ್ ಆಗ್ರಹಿಸಿತ್ತು. ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ತಾರ‌್ಹ ಜೋನಿ, ಅರುಣಾಚಲಪ್ರದೇಶದಲ್ಲಿ ಜನರು ಗೋಮಾಂಸವನ್ನು ಬಹಳ ಹಿಂದಿನಿಂದಲೂ ತಿನ್ನುತ್ತಾ ಬಂದಿದ್ದಾರೆ. ಆದರೆ, ಈ ವಿಷಯ ಇದುವರೆಗೆ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರಲಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News