ಆನ್‍ಲೈನ್ ಡೇಟಿಂಗ್‍ಗೆ ಕೇಂದ್ರ ಸರ್ಕಾರ ಪ್ರೋತ್ಸಾಹ: ಕಾರಣ ಏನು ಗೊತ್ತೇ ?

Update: 2022-07-18 08:58 GMT

ಹೊಸದಿಲ್ಲಿ: ದೇಶದಲ್ಲಿ ಪಾರ್ಸಿ ಜನಸಂಖ್ಯೆಯನ್ನು ಹೆಚ್ಚಿಸಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಯೋಜನೆಯೊಂದನ್ನು ರೂಪಿಸಿದೆ. ವಿವಾಹ ಯೋಗ್ಯ ವಯಸ್ಸಿನ ಅವಿವಾಹಿತರಿಗೆ ಮದುವೆಯಲ್ಲಿ ಆಸಕ್ತಿ ಇಲ್ಲದ ಹಿನ್ನೆಲೆಯಲ್ಲಿ ಪಾರ್ಸಿ ಜನಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ.

ದೇಶದಲ್ಲಿ ಪಾರ್ಸಿ ಸಮುದಾಯಕ್ಕೆ ಸೇರಿದ ವಿವಾಹ ಯೋಗ್ಯ ವಯಸ್ಸಿನ ಶೇಕಡ 30ರಷ್ಟು ಮಂದಿ ಅವಿವಾಹಿತರಾಗಿಯೇ ಉಳಿದಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಈ ಹಿನ್ನೆಲೆಯಲ್ಲಿ ಸಚಿವಾಲಯ 'ಜಿಯೊ ಪಾರ್ಸಿ' ಎಂಬ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಯೋಜನೆ ಆನ್‍ಲೈನ್ ಡೇಟಿಂಗ್‍ಗೆ ಪ್ರೋತ್ಸಾಹ ನೀಡುತ್ತದೆ ಮತ್ತು ವಿವಾಹಕ್ಕೆ ಸಂಬಂಧಿಸಿದಂತೆ ಕೌನ್ಸಿಲಿಂಗ್ ನೀಡುತ್ತದೆ.

ಪಾರ್ಸಿ ಸಮುದಾಯದವರು ವಿವಾಹವಾಗಲು ಮತ್ತು ಮಕ್ಕಳನ್ನು ಪಡೆಯಲು ಪ್ರೋತ್ಸಾಹಿಸುವುದು ಅಗತ್ಯ. ಏಕೆಂದರೆ ಸಮುದಾಯದಲ್ಲಿ ಒಟ್ಟಾರೆ ಫಲವತ್ತತೆ ದರ ಶೇಕಡ 0.8ಕ್ಕೆ ಕುಸಿದಿದೆ. ಪ್ರತಿ ವರ್ಷ 800 ಮಂದಿ ಪಾರ್ಸಿಗಳು ಸಾಯುತ್ತಿದ್ದು, 200 ರಿಂದ 300 ಮಕ್ಕಳು ಮಾತ್ರ ಹುಟ್ಟುತ್ತಿದ್ದಾರೆ. ಹಿಂದೂ, ಮುಸ್ಲಿಂ, ಸಿಖ್ ಹಾಗೂ ಕ್ರೈಸ್ತರಿಗೆ ಹೋಲಿಸಿದರೆ ಈ ಪ್ರಮಾಣ ತೀರಾ ಕಡಿಮೆ ಎಂದು ಯೋಜನೆ ಅನುಷ್ಠಾನಗೊಳಿಸುವ ಏಜೆನ್ಸಿಗಳಲ್ಲಿ ಒಂದಾದ ಪಾರ್ಝೋರ್ ಫೌಂಡೇಷನ್‍ನ ನಿರ್ದೇಶಕ ಶೆರ್ನಾಝ್ ಕಾಮಾ ಹೇಳುತ್ತಾರೆ.

ಹೊಸ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮೀಕ್ಷೆಯ ಪ್ರಕಾರ ಹಿಂದೂ ಸಮುದಾಯದಲ್ಲಿ ಫಲವತ್ತತೆ ದರ ಶೇಕಡ 1.94 ಇದ್ದರೆ, ಮುಸ್ಲಿಮರಲ್ಲಿ 2.36, ಕ್ರಿಶ್ಚಿಯನ್ನರಲ್ಲಿ 1.88 ಮತ್ತು ಸಿಕ್ಖ್ ಸಮುದಾಯದಲ್ಲಿ ಶೇಕಡ 1.61 ಆಗಿದೆ. 2011ರ ಜನಗಣತಿ ಪ್ರಕಾರ ಪಾರ್ಸಿ ಸಮುದಾಯದ ಒಟ್ಟು ಜನಸಂಖ್ಯೆ 1941ರಲ್ಲಿ 1,14,000 ಇದ್ದುದು ಇದೀಗ 57,264ಕ್ಕೆ ಇಳಿದಿದೆ ಎಂದು ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News