ಎಸಿಬಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನಗಳಿಗೆ ತಡೆಯಾಜ್ಞೆ ವಿಧಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ, ಜು. 18: ಭ್ರಷ್ಟಾಚಾರ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ ಸಲ್ಲಿಸಿದ ತನಿಖೆ ಮುಕ್ತಾಯ ವರದಿ ಹಾಗೂ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಅಧಿಕಾರಿಗಳ ಸೇವಾ ದಾಖಲೆ ಕೋರಿರುವುದು ಸೇರಿದಂತೆ ಹಲವು ನಿರ್ದೇಶನಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಮೇಲ್ಮನವಿಯ ವಿಚಾರಣೆ ನಡೆಸಿ, ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ಅರ್ಜಿಯ ವ್ಯಾಪ್ತಿಯಿಂದ ಹೊರಗಿರುವ ಕೆಲವು ಅಪ್ರಸ್ತುತ ಅಭಿಪಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿತು.
ಆದರೆ, ಹೇಳಿಕೆಯನ್ನು ತೆಗೆದು ಹಾಕಲು ಹಾಗೂ ಪ್ರಕರಣವನ್ನು ಉಚ್ಚ ನ್ಯಾಯಾಲಯದ ಇನ್ನೊಂದು ಪೀಠಕ್ಕೆ ವರ್ಗಾಯಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ತಾನು ಸಮತೋಲನ ಕಾಯ್ದುಕೊಳ್ಳಬೇಕು ಎಂದು ಹೇಳಿತು.
‘‘ಸೇವಾ ವರದಿ, ಬಿ ಸಾರಾಂಶ ವರದಿ, ಎಸಿಬಿಯ ಕುರಿತು ಅಭಿಪ್ರಾಯದಂತಹ ಕೋರಿಕೆಯ ವಿಚಾರಣೆ ಕಲಾಪಗಳಿಗೆ ನಾವು ತಡೆ ನೀಡುತ್ತಿದ್ದೇವೆ. ಮೇಲ್ನೋಟಕ್ಕೆ ನ್ಯಾಯಾಧೀಶರು ನೀಡಿದ ಅಭಿಪ್ರಾಯ ಹಾಗೂ ಜಾಮೀನು ಅರ್ಜಿಗೆ ಯಾವುದೇ ಸಂಬಂಧ ಇಲ್ಲ. ಈ ಅಭಿಪ್ರಾಯ ಜಾಮೀನು ಕಲಾಪದ ವ್ಯಾಪ್ತಿಯ ಒಳಗೆ ಬರಲು ಸಾಧ್ಯವಿಲ್ಲ. ಎಸಿಬಿ ಅಧಿಕಾರಿಯ ನಡವಳಿಕೆ ಜಾಮೀನು ಅರ್ಜಿಯೊಂದಿಗೆ ಸಂಬಂಧ ಇಲ್ಲ. ಜಾಮೀನು ಅರ್ಜಿಯನ್ನು ನಿರ್ಧರಿಸುವಂತೆ ನಾವು ಉಚ್ಚ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದೇವೆ. ಇದನ್ನು ಮೂರು ವಾರಗಳ ಬಳಿಕ ಪಟ್ಟಿ ಮಾಡಿ ಎಂದು ತಿಳಿಸಿದ್ದೇವೆ.’’ ಎಂದು ಪೀಠ ಹೇಳಿತು.
ಉಚ್ಚ ನ್ಯಾಯಾಲಯ ನ್ಯಾಯಮೂರ್ತಿಗಳು ಆರೋಪಿಯ ಜಾಮೀನು ಅರ್ಜಿಯನ್ನು ಪರಿಗಣಿಸುವ ಸಂದರ್ಭ ಪ್ರಾಸಿಕ್ಯೂಸನ್ ಕುರಿತು ವರದಿ ಕೋರಿಕೆ, ೨೦೧೬ರಿಂದ ಎಸಿಬಿಯಿಂದ ತನಿಖೆ ನಡೆಯುತ್ತಿರುವ ಪ್ರಕರಣಗಳ ಮುಕ್ತಾಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಿರ್ದೇಶನ ನೀಡಿದ್ದರು ಹಾಗೂ ಎಡಿಜಿಪಿಯ ರಹಸ್ಯ ಸೇವಾ ದಾಖಲೆಗಳನ್ನು ಸಲ್ಲಿಸುವಂತೆ ಸಮನ್ಸ್ ನೀಡಿದ್ದರು ಎಂದು ರಾಜ್ಯ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂದೇಶ್ ಅವರ ವಿರುದ್ಧ ಕರ್ನಾಟಕ ಸರಕಾರ, ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್, ಜೈಲಿನಲ್ಲಿರುವ ಅಧಿಕಾರಿ ಜೆ. ಮಂಜುನಾಥ್ ಸಲ್ಲಿಸಿದ ಮೂರು ಮನವಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಭ್ರಷ್ಟಾಚಾರ ನಿಗ್ರಹ ದಳಕ್ಕೆ ಭ್ರಷ್ಟಾಚಾರವೇ ದಂಧೆಯಾಗಿ ಪರಿಣಮಿಸಿದೆ. ಎಬಿಸಿಯೇ ಅತಿ ಭ್ರಷ್ಟರ ಕೂಪವಾಗಿದೆ. ಇದರ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿ. ಎಸಿಬಿ ಕಚೇರಿಗಳೆಲ್ಲಾ ಕಲೆಕ್ಷನ್ ಸೆಂಟರ್‌ಗಳಾಗಿವೆ. ದೊಡ್ಡ ದೊಡ್ಡ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಹಿಡಿಯುವ ಬದಲು ಬಾಲಂಗೋಚಿಗಳನ್ನು ಹಿಡಿದುಕೊಂಡು ನ್ಯಾಯಾಲಯಕ್ಕೆ ಬರುತ್ತಿರಿ ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡಿದ್ದರು. ಮರುದಿನ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು ಎಸಿಬಿ ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ ಎಂದು ತರಾಟೆಗೆ ತೆಗೆದುಕೊಂಡಿರುವುದಕ್ಕೆ ಬೆದರಿಕೆ ಕರೆಗಳು ಬಂದಿವೆ ಎಂದು ಹೇಳಿದ್ದರು.
ಎಸಿಬಿ ಎಡಿಜಿಪಿಯ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ, ಪ್ರತಿಕೂಲ ಹೇಳಿಕೆಯನ್ನು ತೆಗೆದು ಹಾಕುವಂತೆ ಕೋರಿದರು.
ಕಾರಾಗೃಹದಲ್ಲಿರುವ ಅಧಿಕಾರಿ ಜೆ. ಮಂಜುನಾಥ್ ಪರ ಹಾಜರಾಗಿದ್ದ ಇನ್ನೋರ್ವ ಹಿರಿಯ ನ್ಯಾಯವಾದಿ ಎಸ್. ನಾಗಮುತ್ತು, ಪ್ರಕರಣವನ್ನು ಇನ್ನೊಂದು ಪೀಠಕ್ಕೆ ವರ್ಗಾಯಿಸುವಂತೆ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ‘‘ಕ್ಷಮಿಸಿ, ನಾವು ಸಮತೋಲನ ಕಾಯ್ದುಕೊಳ್ಳಬೇಕು. ನಾವು ಒಂದು ಕಡೆ ಒಲವು ತೋರಿಸಲು ಸಾಧ್ಯವಿಲ್ಲ’’ ಎಂದರು.