×
Ad

‘‘ನಾನು ಕ್ರಿಮಿನಲ್ ಅಲ್ಲ’’: ಸಿಂಗಪುರ ಭೇಟಿಗೆ ಅನುಮತಿ ನೀಡುವಲ್ಲಿ ಕೇಂದ್ರದ ವಿಳಂಬದ ಕುರಿತು ಕೇಜ್ರಿವಾಲ್

Update: 2022-07-18 23:36 IST

ಹೊಸದಿಲ್ಲಿ, ಜು. 18: ಜಾಗತಿಕ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಸಿಂಗಪುರಕ್ಕೆ ಪ್ರಯಾಣಿಸುವ ತನ್ನ ಪ್ರಸ್ತಾವಕ್ಕೆ ಅನುಮತಿ ನೀಡಲು ಕೇಂದ್ರ ಸರಕಾರ ವಿಳಂಬಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷ (ಆಪ್)ದ ಸಂಚಾಲಕ ಅರವಿಂದ ಕೇಜ್ರಿವಾಲ್, ವಿಳಂಬದ ಹಿಂದೆ ರಾಜಕೀಯ ಕಾರಣ ಇದ್ದಂತೆ ಕಾಣುತ್ತದೆ ಎಂದು ಸೋಮವಾರ ಪ್ರತಿಪಾದಿಸಿದ್ದಾರೆ. 

‌ತಾನು ಕ್ರಿಮಿನಲ್ ಅಲ್ಲ ಎಂದು ಒತ್ತಿ ಹೇಳಿರುವ  ಅರವಿಂದ ಕೇಜ್ರಿವಾಲ್, ಸಿಂಗಪುರದಲ್ಲಿ ನಡೆಯಲಿರುವ ‘‘ವಿಶ್ವ ನಗರಗಳ ಶೃಂಗಸಭೆ’’ಯಲ್ಲಿ ತನ್ನ ಪಾಲ್ಗೊಳ್ಳುವಿಕೆ ರಾಷ್ಟ್ರೀಯ ಹೆಮ್ಮೆಯ ವಿಚಾರ ಎಂದಿದ್ದಾರೆ. 

‘‘ನಾನು ಕ್ರಿಮಿನಲ್ ಅಲ್ಲ, ನಾನು ರಾಜ್ಯವೊಂದರ ಚುನಾಯಿತ ಮುಖ್ಯಮಂತ್ರಿ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ. 

‘‘ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ನನ್ನನ್ನು ಯಾಕೆ ನಿರ್ಬಂಧಿಸಲಾಗುತ್ತಿದೆ ಎಂಬುದು ನನ್ನ ತಿಳುವಳಿಕೆಗೆ ನಿಲುಕದ ವಿಚಾರ. ಈ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವುದರಿಂದ ಭಾರತಕ್ಕೆ ಇನ್ನಷ್ಟು ಘನತೆ ಸಿಗಲಿದೆ ಎಂಬುದು ನನ್ನ ಭಾವನೆ’’ ಎಂದು ಅವರು ಹೇಳಿದ್ದಾರೆ.  

ಸಿಂಗಪುರಕ್ಕೆ ಪ್ರಯಾಣಿಸಲು ಅನುಮತಿ ನೀಡುವಂತೆ ಕೋರಿ ಕೇಜ್ರಿವಾಲ್ ಅವರು ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News