×
Ad

ಬೆಲೆ ಏರಿಕೆ,ಜಿಎಸ್‌ಟಿ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ: ಸಂಸತ್ ಅಧಿವೇಶನ ಮೂರನೇ ದಿನವೂ ಮುಂದೂಡಿಕೆ

Update: 2022-07-20 20:58 IST

ಹೊಸದಿಲ್ಲಿ,ಜು.20: ಬೆಲೆ ಏರಿಕೆ,ಜಿಎಸ್‌ಟಿ ಮತ್ತು ಇನ್ನಿತರ ಜ್ವಲಂತ ವಿಷಯಗಳ ಕುರಿತು ಚರ್ಚೆಗಾಗಿ ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲಗಳಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆ ಸತತ ಮೂರನೇ ದಿನವಾದ ಬುಧವಾರವೂ ದಿನದ ಮಟ್ಟಿಗೆ ಮುಂದೂಡಲ್ಪಟ್ಟವು.

ಸದನದೊಳಗೆ ಪ್ರತಿಭಟನೆಯಲ್ಲಿ ತೊಡಗಿದ್ದ ಪ್ರತಿಪಕ್ಷ ಸದಸ್ಯರ ವಿರುದ್ಧ ಬುಧವಾರ ಕೊಂಚ ಹೆಚ್ಚಿನ ಕಠಿಣ ನಿಲುವು ತಳೆದಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು,ಸದನವು ಇರುವುದು ಚರ್ಚೆಗಾಗಿ ಮತ್ತು ವಿಷಯಗಳನ್ನೆತ್ತಲು,ಘೋಷಣೆಗಳನ್ನು ಕೂಗಲು ಮತ್ತು ಕೋಲಾಹಲವನ್ನು ಸೃಷ್ಟಿಸಲು ಅಲ್ಲ ಎಂದು ಹೇಳಿದರು.

 ಈ ಮೊದಲು ಜಿಎಸ್‌ಟಿಯಿಂದ ಹೊರಗಿದ್ದ ಅಗತ್ಯ ವಸ್ತುಗಳನ್ನು ಅದರ ವ್ಯಾಪ್ತಿಗೆ ಸೇರಿಸಿದ್ದನ್ನು ಪ್ರಶ್ನಿಸಿದ ಪ್ರತಿಪಕ್ಷ ಸದಸ್ಯರು ಮೊಸರು,ಬೆಣ್ಣೆ ಮತ್ತು ಮಜ್ಜಿಗೆ ಪ್ಯಾಕೆಟ್‌ಗಳನ್ನು ಹಿಡಿದುಕೊಂಡು ಸದನದ ಅಂಗಳಕ್ಕೆ ಮುತ್ತಿಗೆ ಹಾಕಿದ್ದು ಸ್ಪೀಕರ್‌ಗೆ ತೀವ್ರ ಅಸಮಾಧಾನವನ್ನುಂಟು ಮಾಡಿತ್ತು. ನಿರ್ದಿಷ್ಟವಾಗಿ ಬೆಲೆ ಏರಿಕೆ ಕುರಿತು ಚರ್ಚೆಗಾಗಿ ಸದನದ ಇತರ ಎಲ್ಲ ಕಲಾಪಗಳನ್ನು ಅಮಾನತುಗೊಳಿಸಬೇಕು ಎಂದು ಪ್ರತಿಪಕ್ಷ ಸದಸ್ಯರು ಬಯಸಿದ್ದರು. ಆದರೆ ತಾನು ಶೂನ್ಯಕಾಲದಲ್ಲಿ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನಿಡುವುದಾಗಿ ಸ್ಪೀಕರ್ ಪಟ್ಟು ಹಿಡಿದಿದ್ದರು.

 ಪ್ರತಿಪಕ್ಷ ಸದಸ್ಯರು ಪ್ರದರ್ಶಿಸಿದ್ದ ಭಿತ್ತಿಪತ್ರಗಳು ಬಿರ್ಲಾ ಅವರಿಗೆ ಇನ್ನಷ್ಟು ಸಿಟ್ಟು ತರಿಸಿದ್ದವು. ಸದನದಲ್ಲಿ ಭಿತ್ರಿಪತ್ರಗಳನ್ನು ತರುವುದು ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಮಂಗಳವಾರವೂ ಅವರು ಬೆಟ್ಟು ಮಾಡಿದ್ದರು. ಭಿತ್ತಿಪತ್ರಗಳನ್ನು ಪ್ರದರ್ಶಿಸಲು ಜನರು ನಿಮ್ಮನ್ನು ಇಲ್ಲಿಗೆ ಕಳುಹಿಸಿಲ್ಲ,ಹಾಗೆ ಮಾಡುತ್ತಿರುವವರು ಸಂಸತ್ತಿನ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ ಎಂದು ಸ್ಪೀಕರ್ ಕಿಡಿಕಾರಿದರು.

‘ಅಮೃತ ಕಾಲ’ದಲ್ಲಿ ಜನರು ಅರ್ಥಪೂರ್ಣ ಚರ್ಚೆಗಳನ್ನು ನಮ್ಮಿಂದ ನಿರೀಕ್ಷಿಸುತ್ತಾರೆ ಎಂದು ಅವರು ಹೇಳಿದರು. ಭಾರೀ ಯಶಸ್ಸಿನ ಅವಧಿಯನ್ನು ಸೂಚಿಸುವ ‘ಅಮೃತ ಕಾಲ ’ ಜ್ಯೋತಿಷ್ಯಶಾಸ್ತ್ರದ ಪದವಾಗಿದ್ದು,ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಈಗಿನ ಸ್ಥಿತಿಯನ್ನು ಬಣ್ಣಿಸಲು ಆಗಾಗ್ಗೆ ಈ ಪದವನ್ನು ಬಳಸುತ್ತಿರುತ್ತಾರೆ.

ನಿಯಮಗಳಂತೆ ಚರ್ಚೆಗೆ ಅವಕಾಶ ನೀಡಲು ತಾನು ಸಿದ್ಧನಿದ್ದೇನೆ,ಆದರೆ ಗದ್ದಲ ಮುಂದುವರಿದರೆ ಅಲ್ಲ. ನೀವು ನಿಮ್ಮ ಆಸನಗಳಿಗೆ ಮರಳಿದರೆ ಮಾತ್ರ ನಿಮಗೆ ಅವಕಾಶ ದೊರೆಯುತ್ತದೆ ಎಂದು ಸ್ಪೀಕರ್ ಹೇಳಿದರು.

ಕೋಲಾಹಲ ಮುಂದುವರಿದಾಗ ಲೋಕಸಭೆಯನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಲಾಯಿತು. ಮರುಸಮಾವೇಶಗೊಂಡಾಗಲೂ ಪ್ರತಿಭಟನೆ ಮುಂದುವರಿದಾಗ ಸದನವನ್ನು ಸಂಜೆ ನಾಲ್ಕು ಗಂಟೆಯವರೆಗೆ ಮತ್ತು ಬಳಿಕ ದಿನದ ಮಟ್ಟಿಗೆ ಮುಂದೂಡಲಾಯಿತು. ಅತ್ತ ರಾಜ್ಯಸಭೆಯೂ ಎರಡು ಬಾರಿ ಅಲ್ಪಾವಧಿಗೆ ಮುಂದೂಡಲ್ಪಟ್ಟು ಬಳಿಕ ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.ಉಭಯ ಸದನಗಳು ಗುರುವಾರ ಬೆಳಿಗ್ಗೆ 11 ಗಂಟೆಗೆ ಪುನರಾರಂಭಗೊಳ್ಳಲಿವೆ.

ಇದಕ್ಕೂ ಮುನ್ನ ಬೆಳಿಗ್ಗೆ ಕಾಂಗೆಸ್ ಸದಸ್ಯರು ಸಂಸತ್ ಆವರಣದಲ್ಲಿಯ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆಯನ್ನು ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News