ಪ್ರಪ್ರಥಮ ಬಾರಿಗೆ ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಕುಸಿತ !

Update: 2022-07-21 17:45 GMT

ಹೊಸದಿಲ್ಲಿ, ಮಾ. 20:   ಭಾರತದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ತ್ರೈಮಾಸಿಕ ಬಳಕೆದಾರರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಮೊಬೈಲ್ ಡಾಟಾ ದರದಲ್ಲಿ ಏರಿಕೆಯುಂಟಾಗಿರುವುದು, ಭಾರತದಲ್ಲಿ ಫೇಸ್‌ಬುಕ್‌ನ ಬೆಳವಣಿಗೆ ಕುಂಠಿತಗೊಂಡಿದೆಯೆಂದು ಅದರ ಮಾತೃ ಸಂಸ್ಥೆಯಾದ ಮೆಟಾದ ಹಣಕಾಸು ವಿಭಾಗದ ವರಿಷ್ಠರು ತಿಳಿಸಿದ್ದಾರೆ.

ಹಲವಾರು ಮಹಿಳಾ ಬಳಕೆದಾರರು, ತಮ್ಮ ಸುರಕ್ಷತೆ ಹಾಗೂ ಖಾಸಗಿತನದ ಕುರಿತ ಆತಂಕದಿಂದಾಗಿ ಪುರುಷ ಬಾಹುಳ್ಯದ ಈ ಸಾಮಾಜಿಕ ಜಾಲತಾಣದಿಂದ ದೂರಸರಿದಿದ್ದಾರೆಂದು ವರದಿ ತಿಳಿಸಿದೆ.  2021ರ ಅಂತ್ಯದವರೆಗೆ ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಫೇಸ್‌ಬುಕ್‌ನ ವ್ಯವಹಾರಗಳ ಕುರಿತ ಮೆಟಾ ರಿಸರ್ಚ್‌ಸಂಸ್ಥೆ ನಡೆಸಿದ ಅಧ್ಯಯನದಿಂದ ಈ ವಿಷಯಗಳು ಬೆಳಕಿಗೆ ಬಂದಿವೆ.

ಸುರಕ್ಷತೆಯ ಕೊರತೆ ಹಾಗೂ ಅನಪೇಕ್ಷಣೀಯವಾದ ಸಂಪರ್ಕದ ಕುರಿತ ಕಳವಳದಿಂದಾಗಿ ಗಣನೀಯ ಸಂಖ್ಯೆಯ ಮಹಿಳೆಯರನ್ನು ಫೇಸ್‌ಬುಕ್ ಬಳಸಲು ಹಿಂಜರಿಯುವಂತೆ ಮಾಡಿದೆ ಎಂದು ಅಧ್ಯಯನ ವರದಿ ತಿಳಿಸಿದೆಯೆಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಮಹಿಳೆಯರನ್ನು ಕಡೆಗಣಿಸಿ,ಭಾರತದಲ್ಲಿ ಮೆಟಾ ಯಶಸ್ವಿಯಾಗಲು ಸಾಧ್ಯವಿಲ್ಲವಂದು ವರದಿ ತಿಳಿಸಿದೆ.

ಫೇಸ್‌ಬುಕ್‌ನಲ್ಲಿ ಪ್ರಕಟವಾಗುವ ನಗ್ನತೆಯ ದೃಶ್ಯಗಳು, ಆ್ಯಪ್‌ನ ವಿನ್ಯಾಸದಲ್ಲಿ ಸಂಕೀರ್ಣತೆ, ಸ್ಥಳೀಯ ಭಾಷೆ ಹಾಗೂ ಸಾಕ್ಷರತೆಯ ಅಡೆತಡೆಗಳು ಹಾಗೂ ವಿಡಿಯೋ  ಆಧಾರಿತ ವಿಷಯಗಳನ್ನು ಬಯಸುವಂತ ಹ ಇಂಟರ್‌ನೆಟ್ ಬಳಕೆದಾರರು ಫೇಸ್‌ಬುಕ್ ಬಗ್ಗೆ ನಿರಾಸಕ್ತಿ ವಹಿಸಿರುವುದು ಭಾರತದಲ್ಲಿ ಈ ಸಾಮಾಜಿಕ ಜಾಲತಾಣದ  ಬಳಕೆ ಕುಂಠಿತವಾಗಲು ಇತರ ಕೆಲವು ಕಾರಣಗಳಾಗಿವೆ ಎಂದು  ವರದಿ ತಿಳಿಸಿದೆ. ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದ ಸಮೀಕ್ಷೆಯನ್ನು ಅಧರಿಸಿ  ಮೆಟಾ ಈ ಅಧ್ಯಯನ ವರದಿಯನ್ನು ತಯಾರಿಸಿದೆ.

ಕಳೆದ ವರ್ಷದಿಂದ ಫೇಸ್‌ಬುಕ್‌ನ ಬೆಳವಣಿಗೆ ಕುಂಠಿತವಾಗಿದೆ.140 ಕೋಟಿ ಜನಸಂಖ್ಯೆಯಿರುವ ಭಾರತ ದೇಶದಲ್ಲಿ ಕಳೆದ ಆರು ತಿಂಗಳುಗಳಲ್ಲಿ ಫೇಸ್‌ಬುಕ್ ಕೆಲವು ಲಕ್ಷ ಬಳಕೆದಾರರನ್ನು ಮಾತ್ರವೇ ಸೇರ್ಪಡೆಗೊಳಿಸುವಲ್ಲಿ ಸಫಲವಾಗಿತ್ತು. ಈ ಮಟ್ಟಿಗೆ ಫೇಸ್‌ಬುಕ್‌ನ ಸೋದರ ಆ್ಯಪ್‌ಗಳಾದ  ವಾಟ್ಸ್‌ಆಪ್ ಹಾಗೂ ಇನ್‌ಸ್ಟಾಗ್ರಾಂ ಗಣನೀಯ ಬೆಳವಣಿಗೆಯನ್ನು ದಾಖಲಿಸಿದೆ. ಭಾರತದಲ್ಲಿ ಫೇಸ್‌ಬುಕ್ ಸಾಮಾಜಿಕ ಜಾಲತಾಣವು ಇಂಟರ್‌ನೆಟ್ ಹಾಗೂ ಇತರ  ಆ್ಯಪ್‌ಗಳಿಗಿಂತ ಕಡಿಮೆ ಬೆಳವಣಿಗೆಯನ್ನು ದಾಖಲಿಸಿದೆಯೆಂದು ಮೆಟಾ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News