ಕಲ್ಲುಗಣಿಗಾರಿಕೆ ವಿರೋಧಿಸಿ ಆತ್ಮಹತ್ಯೆಗೆ ಯತ್ನಿಸಿದ ಸಾಧು: ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು

Update: 2022-07-21 17:57 GMT

ಜೈಪುರ, ಜು. 21:  ರಾಜಸ್ಥಾನದ ಭರತಪುರ ಜಿಲ್ಲೆಯಲ್ಲಿ  ಕಲ್ಲುಗಣಿಗಾರಿಕೆಯ ವಿರುದ್ಧ ಸರಕಾರದ ನಿಷ್ಕ್ರಿಯತೆಯನ್ನು ಪ್ರತಿಭಟಿಸಿ ಸಾಧುವೊಬ್ಬರು ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮದಹನಕ್ಕೆ ಯತ್ನಿಸಿದ್ದಾರೆ. ಗಂಭೀರ ಸುಟ್ಟಗಾಯಗಳಾದ ಸಾಧುವನ್ನು ವಿಜಯದಾಸ್ ಎಂದು ಗುರುತಿಸಲಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಿಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ  ಅವರ ಪರಿಸ್ಥಿತಿ ಸ್ಥಿರವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಶ್ರೀಕೃಷ್ಣನ  ಜೀವನದ ಜೊತೆ  ನಂಟು ಹೊಂದಿರುವ ಹಾಗೂ ತಮಗೆ ಪರಮಪವಿತ್ರವಾಗಿರುವ  ಪ್ರದೇಶದಲ್ಲಿ  ಕಲ್ಲು ಗಣಿಗಾರಿಕೆಯನ್ನು  ನಿಷೇಧಿಸಬೇಕೆಂದು ಆಗ್ರಹಿಸಿ ಬ್ರಜ್ ಪರ್ವತ ಪರಿಸರ ಸಂರಕ್ಷಣಾ ಸಮಿತಿ ಎಂಬ ಸಂಘಟನೆಗೆ ಸೇರಿದ ಸಾಧುಗಳು ಮುಷ್ಕರ ನಡೆಸುತ್ತಿದ್ದಾರೆ.

ಕಲ್ಲು ಗಣಿಗಾರಿಕೆಯನ್ನು  ವಿರೋಧಿಸಿ ನಾರಾಯಣ ದಾಸ್ ಎಂಬ ಇನ್ನೋರ್ವ ಸಾಧು ಮೊಬೈಲ್ ಟವರ್‌ನ ಮೇಲೆ ಪ್ರತಿಭಟನೆ ನಡೆಸಿದಾಗ, ಪೊಲೀಸರು ಆತನ ಮನವೊಲಿಸಿ ಸುರಕ್ಷಿತವಾಗಿ ಕೆಳಗಿಳಿಯುವಂತೆ ಮಾಡಿದರು.

ಬ್ರಜ್ ಪರ್ವತವಿರುವ ಪ್ರದೇಶವನ್ನು  ಅರಣ್ಯಭೂಮಿಯೆಂದು ಘೋಷಿಸಿ ಅಧಿಸೂಚನೆಯನ್ನು ಹೊರಡಿಸುವುದಾಗಿ ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರ ತಿಳಿಸಿದೆ. ಆದಾಗ್ಯೂ ಪ್ರಸಕ್ತ ಆ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಗಣಿಗಳು, ಕಾನೂನುಬದ್ಧವಾಗಿ  ಕೆಲಸ ಮಾಡುತ್ತಿವೆ ಎಂದು ಸರಕಾರ ಸ್ಪಷ್ಟೀಕರಣ ನೀಡಿದೆ.
 
ಒಂದು ವೇಳೆ ಈ ಕಲ್ಲು ಗಣಿಗಾರಿಕಾ ಘಟಕಗಳನ್ನು ಮುಚ್ಚಿದಲ್ಲಿ ಸುಮಾರು 2500 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆಂದು ರಾಜ್ಯ ಸರಕಾರ ತಿಳಿಸಿತ್ತು. ಕಲ್ಲುಗಣಿಗಾರಿಕೆಯನ್ನು ಸ್ಥಗಿತಗಳಿಸಲು ದೀರ್ಘ ಸಮಯದಿಂದ ಸಾಧುಗಳ ಬೇಡಿಕೆಗಳಿಗೆ ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರ  ಕಿವಿಗೊಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದೆ. ‘‘ ರಾಜ್ಯ ಸರಕರಾವು ಸಂತರು ಹಾಗೂ ಸ್ವಾಮೀಜಿಗಳ ಬೇಡಿಕೆಗೆ ಕಿವಿಗೊಡುತ್ತಿಲ್ಲ. ಇದರ ಪರಿಣಾಮವೇ ಸಾಧುವಿನ ಆತ್ಮದಹನದ  ಪ್ರಯತ್ನವಾಗಿದೆ ’’ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೆ ತಿಳಿಸಿದ್ದಾರೆ. 

ನೆರೆಯ ರಾಜ್ಯವಾದ ಹರ್ಯಾಣದಲ್ಲಿ ಆಕ್ರಮ ಕಲ್ಲುಗಣಿಗಾರಿಕೆಯನ್ನು  ನಿಲ್ಲಿಸಲು ಹೊರಟ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಲಾರಿ  ಹರಿಸಿ, ಅವರನ್ನು ಹತ್ಯೆಗೈದ ಕೆಲವೇ ದಿನಗಳ ಬಳಿಕ  ರಾಜಸ್ಥಾನದಲ್ಲಿ ಈ ಘಟನೆ ನಡೆದಿದೆ. ಹರ್ಯಾಣದಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಟ್ರಕ್ ಹರಿಸಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಹರ್ಯಾಣದಲ್ಲಿ ಕಲ್ಲುಗಣಿಗಾರಿಕೆ ಮಾಫಿಯಾದ ಕ್ರೌರ್ಯವು  ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News