ವಿರೋಧ ಪಕ್ಷದ 17 ಸಂಸದರು, 100ಕ್ಕೂ ಹೆಚ್ಚು ಶಾಸಕರಿಂದ ದ್ರೌಪದಿ ಮುರ್ಮು ಪರ ಮತ: ವರದಿ

Update: 2022-07-22 06:50 GMT
Photo:PTI

ಹೊಸದಿಲ್ಲಿ: ಭಾರತದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಪರವಾಗಿ ಹೆಚ್ಚಿನ ಸಂಖ್ಯೆಯ ವಿರೋಧ ಪಕ್ಷದ ಶಾಸಕರು ಅಡ್ಡ ಮತದಾನ ಮಾಡಿದರು.

ಮೂಲಗಳ ಪ್ರಕಾರ ದ್ರೌಪದಿ ಮುರ್ಮು ಅವರ ಬೆಂಬಲಕ್ಕೆ ವಿರೋಧ ಪಕ್ಷದ ಸುಮಾರು 125 ಶಾಸಕರು ಹಾಗೂ  17 ಸಂಸದರು ಅಡ್ಡ ಮತದಾನ ಮಾಡಿದರು.

ಪ್ರತಿಪಕ್ಷದ ಯಶವಂತ್ ಸಿನ್ಹಾ ವಿರುದ್ಧ ದ್ರೌಪದಿ ಮುರ್ಮು ವಿಜೇತರಾಗಿ ಆಯ್ಕೆಯಾದ ಕೂಡಲೇ ಬಿಜೆಪಿಯ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಹಾಗೂ  ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ ವಿರೋಧ ಪಕ್ಷದ ಶಾಸಕರಿಗೆ "ಧನ್ಯವಾದ" ಸಂದೇಶಗಳನ್ನು ಹಾಕಿದ್ದಾರೆ.

140 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಒಬ್ಬನೇ ಒಬ್ಬ ಶಾಸಕನನ್ನು ಹೊಂದಿಲ್ಲದ ಕೇರಳದಿಂದ ದ್ರೌಪದಿ ಮುರ್ಮು ಅನಿರೀಕ್ಷಿತ ಮತವನ್ನು ಗೆದ್ದಿದ್ದಾರೆ.

ಕೇರಳದಲ್ಲಿ ಸಿಪಿಎಂ ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್ ಹಾಗೂ  ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರತಿಪಕ್ಷಗಳು ಸಿನ್ಹಾ ಅವರಿಗೆ ಬೆಂಬಲ ಘೋಷಿಸಿದ್ದವು.

ಅಸ್ಸಾಂನಲ್ಲಿ 25 ವಿರೋಧ ಪಕ್ಷದ ಶಾಸಕರು ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಎರಡೂ ಸ್ಥಾನಗಳನ್ನು ಗೆದ್ದಾಗಲೂ ಇದೇ ರೀತಿಯ ಅಡ್ಡ ಮತದಾನ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News