14,000 ಕೋಟಿ ರೂ. ಸಾಲಕ್ಕೆ ಎಸ್‍ಬಿಐಗೆ ಅರ್ಜಿ ಸಲ್ಲಿಸಿದ ಅದಾನಿ ಸಮೂಹ

Update: 2022-07-22 06:58 GMT

ಹೊಸದಿಲ್ಲಿ: ಗುಜರಾತ್‍ನ ಮುಂದ್ರಾದಲ್ಲಿ ಕಲ್ಲಿದ್ದಲಿನಿಂದ ಪೊಲಿವಿನೈಲ್ ಕ್ಲೋರೈಡ್ (ಪಿವಿಸಿ) ತಯಾರಿ ಘಟಕ ಸ್ಥಾಪಿಸಲೆಂದು ರೂ. 14,000 ಕೋಟಿ ಸಾಲಕ್ಕಾಗಿ ಅದಾನಿ ಸಮೂಹವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಅರ್ಜಿ ಸಲ್ಲಿಸಿದೆ ಎಂಬ ಮಾಹಿತಿಯಿದೆ. ಈ ಯೋಜನೆಯ ಒಟ್ಟು ವೆಚ್ಚ ರೂ. 19,000 ಕೋಟಿ ಎನ್ನಲಾಗಿದೆ ಎಂದು business-standard.com ವರದಿ ಮಾಡಿದೆ.

ಕೆಲವೇ ದಿನಗಳ ಹಿಂದೆ, ಅಂದರೆ ಜೂನ್ 26ರಂದು ಅದಾನಿ ಸಮೂಹಕ್ಕೆ ಮುಂದ್ರಾದಲ್ಲಿ ಕಾಪರ್ ರಿಫೈನರಿ ಸ್ಥಾಪನೆಗೆ ರೂ 6,071 ಕೋಟಿ ಸಾಲವನ್ನು ಎಸ್‍ಬಿಐ ಮಂಜೂರುಗೊಳಿಸಿತ್ತು. ಈ ಸಾಲವನ್ನು ಅದಾನಿ ಸಮೂಹದ ಅಂಗ ಸಂಸ್ಥೆ ಕಚ್ಛ್ ಕಾಪರ್ ಲಿಮಿಟೆಡ್ ಪಡೆದುಕೊಂಡಿತ್ತು.

ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಅದಾನಿ ಸಮೂಹವು ನವಿ ಮುಂಬೈಯಲ್ಲಿನ ಗ್ರೀನ್‍ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ರೂ. 12,770 ಕೋಟಿ ಸಾಲ ಪಡೆದಿತ್ತು. ಈ ಸಾಲವನ್ನು ಸಮೂಹದ ಇನ್ನೊಂದು ಅಂಗಸಂಸ್ಥೆಯಾಗಿರುವ ನವಿ ಮುಂಬೈ ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಪ್ರೈವೇಟ್ ಲಿಮಿಟೆಡ್ ಪಡೆದುಕೊಂಡಿತ್ತು,.

ಮುಂದ್ರಾದಲ್ಲಿ ಅದಾನಿ ಸಮೂಹ ನಿರ್ಮಿಸಲುದ್ದೇಶಿಸಿರುವ ಪಿವಿಸಿ ಪ್ಲಾಂಟ್ ಅಲ್ಲಿರುವ ಪೆಟ್ರೋಕೆಮಿಕಲ್ ಕ್ಲಸ್ಟರ್ ಭಾಗವಾಗಲಿದೆ. ಈ ಸ್ಥಾವರವು ವಾರ್ಷಿಕ 2000 ಕಿಲೋ ಟನ್  ಸಾಮಥ್ರ್ಯ ಹೊಂದಿದ್ದು ಎಮಲ್ಶನ್ ಪಿವಿಸಿ, ಸಸ್ಪೆನ್ಶನ್ ಪಿವಿಸಿ ಮತ್ತು ಕ್ಲೋರಿನೇಟೆಡ್ ಎಮಲ್ಶನ್ ಮುಂತಾದ ಉತ್ಪನ್ನಗಳನ್ನು ತಯಾರಿಸಲಿದೆ. ಈ ಯೋಜನೆಯ ಮೊದಲ ಹಂತ 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News