×
Ad

ಸ್ಮೃತಿ ಇರಾನಿ ಪುತ್ರಿಯ ಗೋವಾ ರೆಸ್ಟಾರೆಂಟ್‍ನ ಮದ್ಯ ಪರವಾನಗಿ ನವೀಕರಣದಲ್ಲಿ ವಂಚನೆ: ಏನಿದು ಆರೋಪ?

Update: 2022-07-23 16:17 IST

 ಹೊಸದಿಲ್ಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಝೋಯಿಶ್ ಇರಾನಿ ಅವರು ಗೋವಾದ ಅಸ್ಸಾಗೋವಾ ಎಂಬಲ್ಲಿ ನಡೆಸುತ್ತಿರುವ ಸಿಲ್ಲಿ ಸೋಲ್ಸ್ ಕೆಫೆ ಎಂಡ್ ಬಾರ್ ಎಂಬ ಪ್ರತಿಷ್ಠಿತ ರೆಸ್ಟಾರೆಂಟ್‍ನ ಮಾಲೀಕರು ರೆಸ್ಟಾರೆಂಟ್‍ನ ಮದ್ಯ ಲೈಸನ್ಸ್ ಅನ್ನು ಮೃತ ವ್ಯಕ್ತಿಯೊಬ್ಬರ ಹೆಸರಿನಲ್ಲಿ ನವೀಕರಿಸಿರುವುದು ಪತ್ತೆಯಾಗಿ ವಿವಾದಕ್ಕೀಡಾಗಿದೆ.

 ಈ ಸಂಬಂಧ  ವಕೀಲ ಏರಿಸ್ ರಾಡ್ರಿಗಸ್ ಅವರಿಂದ ದೊರೆತ ದೂರಿನ ಹಿನ್ನೆಲೆಯಲ್ಲಿ ಗೋವಾದ ಅಬಕಾರಿ ಆಯುಕ್ತ ನಾರಾಯಣ ಎಂ ಗಡ್ ಅವರು ಜುಲೈ 21ರಂದು ರೆಸ್ಟಾರೆಂಟ್‍ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಪರವಾನಗಿ ಪಡೆಯಲು ಮಾಲೀಕರು ವಂಚನೆ ಮತ್ತು ಫೋರ್ಜರಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ವಕೀಲರು ಆರೋಪಿಸಿದ್ದರು.

ಜುಲೈ 29ರಂದು ಪ್ರಕರಣ ನ್ಯಾಯಾಲಯದ ಮುಂದೆ ಬರುವ ನಿರೀಕ್ಷೆಯಿದೆ.

ಶೋಕಾಸ್ ನೋಟಿಸಿನ ಪ್ರಕಾರ ರೆಸ್ಟಾರೆಂಟ್‍ನ ಮದ್ಯ ಪರವಾನಗಿ ಹೊಂದಿದ್ದ ವ್ಯಕ್ತಿ ಮೇ 17, 2021 ರಲ್ಲಿಯೇ ನಿಧನ ಹೊಂದಿದ್ದರೂ ಅವರ ಹೆಸರಿನಲ್ಲಿಯೇ ಪರವಾನಗಿಯನ್ನು ಕಳೆದ ತಿಂಗಳು ನವೀಕರಿಸಲಾಗಿತ್ತು.

ಜೂನ್ 22ರಂದು ರೆಸ್ಟಾರೆಂಟ್ ಪರವಾನಗಿ ನವೀಕರಣಕ್ಕಾಗಿ ನಿಧನರಾಗಿದ್ದ ಆಂಟೊನಿ ಡಿಗಾಮ ಎಂಬವರ ಹೆಸರಿನಲ್ಲಿ ಅರ್ಜಿ ಸಲ್ಲಿಸಿತ್ತು. ಈ ವ್ಯಕ್ತಿ ಮುಂಬೈಯ ವಿಲೇ ಪಾರ್ಲೆ ನಿವಾಸಿಯಾಗಿದ್ದರು ಹಾಗೂ  ಅವರ ಹೆಸರಿನ ಮರಣ ಪ್ರಮಾಣಪತ್ರವನ್ನೂ ವಕೀಲರು ಹಾಜರುಪಡಿಸಿದ್ದಾರೆ.

ಆರ್‍ಟಿಐ ಮೂಲಕ ಅವರು ರೆಸ್ಟಾರೆಂಟ್ ಲೈಸನ್ಸ್ ನವೀಕರಣಕ್ಕೆ ಹಾಜರುಪಡಿಸಿದ್ದ ಪರವಾನಗಿಗಳ ಪ್ರತಿಗಳನ್ನು ಪಡೆದುಕೊಂಡಿದ್ದಾರೆ ಹಾಗೂ ಕೇಂದ್ರ ಸಚಿವೆಯೊಬ್ಬರ ಕುಟುಂಬ ಅಬಕಾರಿ ಅಧಿಕಾರಿಗಳು ಮತ್ತು ಸ್ಥಳೀಯ ಅಸ್ಸಗೋವಾ ಪಂಚಾಯತ್ ಜತೆಗೂಡಿ ನಡೆಸಿದ ಈ ವಂಚನೆಯ ಸಮಗ್ರ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News