ಕಸ ಚೆಲ್ಲಿದ್ದಕ್ಕಾಗಿ ಪಂಜಾಬ್ ಮುಖ್ಯಮಂತ್ರಿಯ ಚಂಡಿಗಡ ನಿವಾಸಕ್ಕೆ 10,000 ರೂ.ದಂಡ
ಹೊಸದಿಲ್ಲಿ,ಜು.23: ಚಂಡಿಗಡ ಮಹಾನಗರ ಪಾಲಿಕೆ (ಸಿಎಂಸಿ)ಯು ಕಸ ಚೆಲ್ಲಿದ್ದಕ್ಕಾಗಿ ಪಂಜಾಬ ಮುಖ್ಯಮಂತ್ರಿ ಭಗವಂತ ಮಾನ್ ಅವರ ಇಲ್ಲಿಯ ನಿವಾಸಕ್ಕೆ ಶನಿವಾರ 10,000 ರೂ.ಗಳ ದಂಡವನ್ನು ವಿಧಿಸಿದೆ.
ಮಾನ್ ಅವರ ಭದ್ರತಾ ತಂಡದ ಭಾಗವಾಗಿರುವ ಸಿಆರ್ಪಿಎಫ್ ಬಟಾಲಿಯನ್ 113ರ ಡಿಎಸ್ಪಿ ಹರ್ಜಿಂದರ್ ಸಿಂಗ್ ಅವರ ಹೆಸರಿನಲ್ಲಿ ದಂಡದ ನೋಟಿಸ್ ನೀಡಲಾಗಿದೆ.ಸಿಎಂಸಿಯಿಂದ ಪದೇ ಪದೇ ಎಚ್ಚರಿಕೆಗಳ ಬಳಿಕ ಅನಿವಾರ್ಯವಾಗಿ ದಂಡದ ಚಲನ್ ನೀಡಲಾಗಿದೆ ಎಂದು ಬಿಜೆಪಿಯ ಕಾರ್ಪೊರೇಟರ್ ಮಹೇಶ್ ಇಂದರ್ ಸಿಂಗ್ ಸಿಧು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಕಸ ಚೆಲ್ಲಲಾಗುತ್ತಿತ್ತು. ಸಾಮಾನ್ಯವಾಗಿ ಮುಖ್ಯಮಂತ್ರಿಗಳು ನಿವಾಸದಲ್ಲಿರುವಾಗ 250-300 ಜನರೂ ಅಲ್ಲಿರುತ್ತಾರೆ. ಸಂಗ್ರಹಗೊಂಡ ಕಸವನ್ನು ಮನೆಯ ಎರಡೂ ಪಾರ್ಶ್ವಗಳಲ್ಲಿ ಎಸೆಯಲಾಗುತ್ತಿತ್ತು ಎಂದು ಸಿಧು ತಿಳಿಸಿದರು. ಈ ಮನೆ ಚಂಡಿಗಡದ ಐಷಾರಾಮಿ ಪ್ರದೇಶದಲ್ಲಿದೆ.ದಂಡ ವಿಧಿಸಲಾದ ಮನೆಯು ಸೇರಿದಂತೆ ಒಂದೇ ಆವರಣದಲ್ಲಿರುವ ನಾಲ್ಕು ಮನೆಗಳು ಮುಖ್ಯಮಂತ್ರಿಗಳ ನಿವಾಸವಾಗಿವೆ.