ಮೇಘಾಲಯ ಬಿಜೆಪಿ ಮುಖಂಡನ ರೆಸಾರ್ಟ್ ಮೇಲೆ ದಾಳಿ; ವೇಶ್ಯಾಗೃಹ ಎಂದ ಪೊಲೀಸರು!

Update: 2022-07-24 03:13 GMT

ಗುವಾಹತಿ: ಅನೈತಿಕ ಕಳ್ಳಸಾಗಾಣಿಕೆ ಆರೋಪದಲ್ಲಿ ಮೇಘಾಲಯ ಬಿಜೆಪಿ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಉಗ್ರಗಾಮಿ ನಾಯಕ ಬೆರ್ನಾರ್ಡ್ ಎನ್. ಮರಕ್ ಅಲಿಯಾಸ್ ರಿಂಪು ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದು ಕೇಂದ್ರದಲ್ಲಿ ಅಧಿಕಾರಾರೂಢ ಬಿಜೆಪಿಗೆ ತೀವ್ರ ಮುಜುಗರ ತಂದಿದೆ. ಪಶ್ಚಿಮ ಗಾರೊ ಹಿಲ್ಸ್ ಜಿಲ್ಲೆಯ ತುರಾದಲ್ಲಿ ರಿಂಪು ವಿರುದ್ಧ ಪ್ರಕರಣ ದಾಖಲಾಗಿದೆ.

ಆದರೆ ನಾನು ತಲೆ ಮರೆಸಿಕೊಂಡಿಲ್ಲ. ಪೊಲೀಸ್ ತನಿಖೆಗೆ ಸಹಕರಿಸುತ್ತಾ ಬಂದಿದ್ದೇನೆ ಎಂದು ರಿಂಪು ಸಮುಜಾಯಿಷಿ ನೀಡಿದ್ದಾರೆ.

ಮುಖ್ಯಮಂತ್ರಿ ಕೊರ್ನಾಡ್ ಸಂಗ್ಮಾ, ನಿನ್ನೆ ನಡೆದ ದಾಳಿಯನ್ನು ಫೆಬ್ರವರಿಯಲ್ಲಿ ದಾಖಲಾದ ಪೋಕ್ಸೊ ಪ್ರಕರಣದ ಜತೆ ಸಂಬಂಧ ಕಲ್ಪಿಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ. ಸಂಗ್ಮಾ ರಾಜಕೀಯವಾಗಿ ನೆಲೆ ಕಳೆದುಕೊಳ್ಳುತ್ತಿದ್ದು, ರಾಜಕೀಯ ಕಾರಣಗಳಿಗಾಗಿ ನನ್ನನ್ನು ಬಂಧಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದರೆ. ಪೋಕ್ಸೊ ಪ್ರಕರಣದಲ್ಲಿ ತಾನು ಆರೋಪಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಬಿಜೆಪಿಯ ಮೇಘಾಲಯ ರಾಜ್ಯ ಘಟಕ ಈ ಬಗ್ಗೆ ತುಟಿ ಬಿಚ್ಚಿಲ್ಲ. ಯಾವುದೇ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ ಎಂದು ndtv.com ವರದಿ ಮಾಡಿದೆ.

ಬೆರ್ನಾರ್ಡ್ ಎನ್ ಮರಕ್‍ಗೆ ಸೇರಿದ ರೆಸಾರ್ಟ್ ಮೇಲೆ ಶನಿವಾರ ಮಧ್ಯರಾತ್ರಿ ಪೊಲೀಸರು ದಾಳಿ ನಡೆಸಿದ್ದರು. ಆರು ಮಕ್ಕಳನ್ನು ಕೊಠಡಿಯೊಂದರಲ್ಲಿ ಕೂಡಿಹಾಕಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ರೆಸಾರ್ಟ್ ವೇಶ್ಯಾಗೃಹವಾಗಿತ್ತು ಎಂದು ಆಪಾದಿಸಿದ ಪೊಲೀಸರು, ಬಿಜೆಪಿ ನಾಯಕ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ. 73 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಎಲ್ಲ ಮಕ್ಕಳಿಗೂ ಮಾನಸಿಕವಾಗಿ ಆಘಾತವಾಗಿದ್ದು, ಸರಿಯಾಗಿ ಮಾತನಾಡುವ ಸ್ಥಿತಿಯಲ್ಲೂ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News